ರಾಜ್ಯ

ನಗರದಲ್ಲಿ ಆರ್ಭಟಿಸಿದ ಬೆಂಝ್ ಕಾರು: ಸರಣಿ ಅಪಘಾತದಲ್ಲಿ 1 ಸಾವು, 4 ಗಾಯ

Manjula VN

ಬೆಂಗಳೂರು: ವೈದ್ಯನೊಬ್ಬ ಅತಿವೇಗವಾಗಿ ಚಲಾಯಿಸಿದ ಬೆಂಜ್ ಕಾರಿನ ಆರ್ಭಟಕ್ಕೆ ನಗರದ ಜನತೆ ಭಾನುವಾರ ಬೆಚ್ಚಿ ಬೀಳುವಂತೆ ಮಾಡಿತ್ತು.

ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ ವೈದ್ಯನೊಬ್ಬ ನಿನ್ನೆ ಜಯನಗರದ ಅಶೋಖ ಪಿಲ್ಲರ್ ಬಳಿ ಯದ್ವತದ್ವಾ ಕಾರು ಓಡಿಸಿದ್ದಾನೆ. ವೈದ್ಯನ ಕಾರಿನ ಆರ್ಭಟ ಸುಮಾರು 3 ಕಿ.ಮೀ ವರೆಗೂ ಮುಂದುವರೆದಿತ್ತು. 3 ಸ್ಥಳದಲ್ಲಿ ಅಪಘಾತ ಮಾಡಿದ ಕಾರು ಕೊನೆಗೆ ರಸ್ತೆ ಪಕ್ಕದಲ್ಲಿದ್ದ ಮನೆಯೊಂದಕ್ಕೆ ಗುದ್ದುವ ಮೂಲಕ ಅಂತ್ಯಗೊಂಡಿತ್ತು. ಘಟನೆ ವೇಳೆ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದು, ಮಹಿಳೆ ಸೇರಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಏನಿದು ಘಟನೆ?

ಬನಶಂಕರಿಯ ನಿವಾಸಿಯಾಗಿರುವ ಡಾ.ಶಂಕರ್ ಎಂಬುವವರು ಮೂಳೆ ತಜ್ಞರಾಗಿದ್ದು, ಜಯನಗರ 4ನೇ ಬ್ಲಾಕ್ ನಲ್ಲಿ ಸಿದ್ಧಾರ್ಥ ಎಂಬ ಹೆಸರಿನ ಕ್ಲಿನಿಕ್ ಒಂದನ್ನು ನಡೆಸುತ್ತಿದ್ದಾರೆ. ಕಾರಿನ ನಿಯಂತ್ರಣ ಕಳೆದುಕೊಂಡಿದ್ದ ವೈದ್ಯ ಮೊದಲು ಅಶೋಕ ಪಿಲ್ಲರ್ ಸಮೀಪವಿದ್ದ ಸ್ವಿಫ್ಟ್ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ವೈದ್ಯನ ಬೆಂಝ್ ಕಾರು ಡಿಕ್ಕಿ ಹೊಡೆದು. ಅಲ್ಲಿಂದ ಮುಂದೆ ಹೋಗಿ ಮಾಧವನ್ ಪಾರ್ಕ್ ಬಳಿ ಜೆನ್ ಹಾಗೂ ಇಂಡಿಕಾ ಕಾರುಗಳಿಗೂ ಡಿಕ್ಕಿ ಹೊಡಿದಿದ್ದಾರೆ.

ಡಿಕ್ಕಿ ಹೊಡೆದ ನಂತರ ಮತ್ತೆ ಮುಂದೆ ಸಾಗಿರುವ ಕಾರು ಭೈರಸಂದ್ರ 3ನೇ ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ನುಗ್ಗುವಾಗ ಸ್ಥಳದಲ್ಲಿದ್ದ ವಿದ್ಯುತ್ ಕಂಬವೊಂದನ್ನು ಮುಟ್ಟಿಕೊಂಡು ಮುಂದಿದ್ದ ಹಂಪ್ಸ್ ಎಗರಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಚಹಾ ಕುಡಿಯುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದಿದೆ. ನಂತರ ದ್ವಿಚಕ್ರ ವಾಹನ ಹಾಗೂ ದಂಪತಿಗಳ ಸಮೇತರ ರಸ್ತೆ ಪಕ್ಕದಲ್ಲಿದ್ದ ಮನೆಗೆ ಡಿಕ್ಕಿ ಹೊಡೆದಿದೆ.

ಘಟನೆ ವೇಳೆ ಟೀ ಕುಡಿಯುತ್ತಿದ್ದ ದಂಪತಿಗಳ ಪೈಕಿ ಭೈರಸಂದ್ರ ನಿವಾಸಿಯಾಗಿರುವ ರಿಜ್ವಾನ್ ಖಾನ್ ಅವರು ಸಾವನ್ನಪ್ಪಿದ್ದು, ಇವರ ಪತ್ನಿ ಮೌಸೀನಾ ಖಾನ್ ಅವರು ಗಾಯಗೊಂಡಿದ್ದಾರೆ. ಇನ್ನು ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿದ್ದ ಮಹಜೀದ್ ಖಾನ್ ಹಾಗೂ ತಂಜೀಮಾ ಖಾನುಂ ಎಂಬುವವರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ 3 ಕಾರು ಹಾಗೂ 2 ದ್ವಿಚಕ್ರ ವಾಹನಗಳು ಜಖಂಗೊಂಡಿವೆ.

ಅಪಘಾತಕ್ಕೆ ಕಾರಣನಾದ ಕಾರಿನಲ್ಲಿದ್ದ ವೈದ್ಯ ಡಾ.ಶಂಕರ್ (50) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಘಟನೆ ನಂತರ ಸ್ಥಳೀಯರು ಶಂಕರ್ ಅವರನ್ನು ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ವಿಲ್ಸನ್ ಗಾರ್ಡನ್ ಪೊಲೀಸರು ಶಂಕರ್ ಅವರನ್ನು ವಶಕ್ಕೆ ಪಡೆದಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಅಪಘಾತ ಸಂಭವಿಸಿದ ನಂತರ ವೈದ್ಯನನ್ನು ತಪಾಸಣೆಗೊಳಪಡಿಸಿದಾಗ ವೈದ್ಯ ಮದ್ಯಪಾನ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಕಾರು ಚಲಾಯಿಸುವ ವೇಳೆ ವೈದ್ಯನಿಗೆ ತಲೆಸುತ್ತು ಬಂದಿದೆ. ಈ ವೇಳೆ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡ ಕಾರಣ ಘಟನೆ ಸಂಭವಿಸಿದೆ ಎಂದು ಪೊಲೀಸರ ಬಳಿ ವೈದ್ಯ ಹೇಳಿಕೊಂಡಿದ್ದಾನೆಂದು ಹೇಳಲಾಗುತ್ತಿದೆ.

SCROLL FOR NEXT