ರಾಜ್ಯ

ನೀಲಗಿರಿ ಮರ ಬೆಳೆಯಲು ಸರ್ಕಾರ ಅವಕಾಶ ನೀಡುವುದಿಲ್ಲ :ಸಿದ್ದರಾಮಯ್ಯ

Shilpa D

ಕೋಲಾರ:  ಕೋಲಾರ ಜಿಲ್ಲೆಯಲ್ಲಿ ನೀಲಗಿರಿ ಮರಗಳನ್ನು ಬೆಳೆಯಲು ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯತಿಳಿಸಿದ್ದಾರೆ.

ಕೋಲಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಾನಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ರೈತರು ಸಂಪೂರ್ಣವಾಗಿ ಬೋರ್ ವೆಲ್ ಗಳನ್ನು ಅವಲಂಬಿಸಿದ್ದಾರೆ, ನೀಲಗಿರಿ ಮರಗಳನ್ನು ಬೆಳೆಯುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ, ಈ ಕಾರಣಕ್ಕಾಗಿ ನೀಲಗಿರಿ ಮರಗಳನ್ನು ಬೆಳೆಯಲು ಹಾಗೂ ಮಾರಾಟ ಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

43 ವರ್ಷಗಳ ನಂತರ ರಾಜ್ಯದಲ್ಲಿ ಈ ರೀತಿಯ ಬರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಿಸಲು ಸಜ್ಜಾಗಿದೆ ಎಂದರು. ಜಿಲ್ಲೆಯಲ್ಲಿ ರೋಮಾನಿಯ ಗಿಡಗಳನ್ನು ಬೆಳೆಯಲು ಅವಶ್ಯಕವಿರುವ  ಹಣವನ್ನು ಬಿಡುಗಡೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಹಿಂಗಾರು ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಜಿಲ್ಲಾಡಳಿತ ಸೂಕ್ತ ವರದಿ ಸಲ್ಲಿಸಿಲ್ಲ. ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಯಾವುದೇ ಹಿಂಗಾರು ಬೆಳೆ ನಷ್ಟ ಉಂಟಾಗಿಲ್ಲ ಎಂದು ಪ್ರಸ್ತಾಪಿಸಲಾಗಿದೆ.

ಈ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅವರನ್ನು, 'ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಹಿಂಗಾರು ಬೆಳೆ ನಷ್ಟ ಆಗಿದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದೀರಾ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ನಮ್ಮಲ್ಲಿ ಹಿಂಗಾರು ಬೆಳೆ ಬೆಳೆಯುವುದಿಲ್ಲ. ಆದರೆ ಹಿಂಗಾರು ಮಳೆಯಿಂದ ರಾಗಿ, ನೆಲಗಡಲೆ ಬೆಳೆಗಳು ನಷ್ಟಕ್ಕೀಡಾಗಿವೆ ಎಂದರು.

SCROLL FOR NEXT