ಬೆಂಗಳೂರು: ಬ್ಯಾಗಿನಿಂದ ಹಣ ಬಿದ್ದಿದೆ ಎಂದು ಹೇಳಿ ಗಮನ ಬೇರೆಡೆ ಸೆಳೆದು ಅಕೌಂಟೆಂಟ್ ಬಳಿಯಿಂದ 20 ಲಕ್ಷ ರು. ಹಣ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಮಹದೇವಪುರ ವ್ಯಾಪ್ತಿಯ ಕುಂಡಲಹಳ್ಳಿಯಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ 12.30 ರ ವೇಳೆಗೆ ಫೆಸಿಲಿಟಿ ಮ್ಯಾನೇಜ್ ಮೆಂಟ್ ಕಂಪನಿಯ ಮುಖ್ಯ ಲೆಕ್ಕಿಗ ಬಿ.ಎಂ ಅಶೋಕ್ ಕುಂಡಲಹಳ್ಳಿ ಎಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಬೈಕ್ ನಲ್ಲಿ ವಾಪಸ್ ಬರುತ್ತಿದ್ದರು.
ಅಶೋಕ್ ಎಸಿಎಸ್ ಲೇಔಟ್ ಬಳಿ ತಲುಪುತ್ತಿದ್ದಂತೆಯೇ ಮತ್ತೊಂದು ಬೈಕ್ ನಲ್ಲಿ ಬಂದ ಇಬ್ಬರು ತಮ್ಮ ಬಳಿಯಿದ್ದ ಕೆಲ ನೋಟುಗಳನ್ನು ರಸ್ತೆಗೆ ಎಸೆದು, ನಿಮ್ಮ ಬ್ಯಾಗ್ ನಿಂದ ಹಣ ಬೀಳುತ್ತಿದೆ ನೋಡಿ ಎಂದು ಹೇಳಿದ್ದಾರೆ. ಇದನ್ನು ನಂಬಿದ ಅಶೋಕ್ ಬೈಕ್ ನಿಲ್ಲಿಸಿ ರಸ್ತೆಯ ಮೇಲಿದ್ದ ಹಣವನ್ನು ಎತ್ತಿಕೊಳ್ಳಲು ಹೋದ ವೇಳೆ ಮತ್ತೊಂದು ಬೈಕ್ ನಲ್ಲಿದ್ದ ಹಿಂಬದಿ ಸವಾರ ಬಂದು ಅಶೋಕ್ ಬಳಿಯಿದ್ದ ಬ್ಯಾಗ್ ಕಸಿದು ಕೊಂಡು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಬೈಕ್ ನಲ್ಲಿ ಬಂದ ಅಪರಿಚಿತರು ಬ್ಯಾಂಕ್ ಬಳಿಯಿಂದ ಅಶೋಕ್ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.