ಬೆಂಗಳೂರು: ಬಿರು ಬಿಸಿಲ ಬೇಗೆಗೆ ತತ್ತರಿಸಿದ್ದ ಸಿಲಿಕಾನ್ ಸಿಟಿ ಕಳೆದ ಮೂರು ದಿನಗಳಿಂದ ವರುಣನ ಕರುಣೆಯಿಂದ ತಂಪಾಗಿದೆ.
ನಿನ್ನೆ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿರುವ ವರದಿಯಾಗಿದ್ದು, ರಾಜ್ಯ ರಾಜಧಾನಿಯಲ್ಲಿ ಇಂದು ಕೂಡ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಿನ್ನೆ ಬೆಂಗಳೂರು ಹೊರ ವಲಯ ಆನೇಕಲ್ ನ ಯೆಮಾಲೆಯಲ್ಲಿ ದಾಖಲೆಯ 67.5 ಮಿಮಿ ಮಳೆಯಾಗಿದೆ, ಸರ್ಜಾಪುರದಲ್ಲಿ 47.5 ಬೆಂಗಳೂರು ದಕ್ಷಿಣ ತರಲೂರಿನಲ್ಲಿ 47. ಮಿಮಿ, ವರ್ತೂರಿನಲ್ಲಿ 43.5 ಮಿಮಿ ಮಳೆಯಾಗಿರುವ ವರದಿಯಾಗಿದೆ.
ಇದೇ ವೇಳೆ ನಗರದಲ್ಲಿ ಮಳೆಯಿಂದಾಗಿ ಹಲವು ಮರಗಳು ಧರೆಗುಳಿದಿವೆ. ನಗರ ರೈಲ್ವೆ ನಿಲ್ದಾಣ, ಕೋರಮಂಗಲ 1ನೇ ಬ್ಲಾಕ್ ನಲ್ಲಿ ಮರಗಳು ಉರುಳಿ ಬಿದ್ದಿದ್ದವು. ಇನ್ನು ಹಲವೆಡೆ ಮರಗಳು ಬೃಹತ್ ಕೊಂಬೆಗಳು ಮುರಿದು ಬಿದ್ದು ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ಬಿಬಿಎಂಪಿ ತಿಳಿಸಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ, ಕೋಲಾರ ಸಮೀಪದ ಮಾಲೂರಿನಲ್ಲಿ 70.5 ಮಿಮಿ ದಾಖಲೆಯ ಮಳೆಯಾಗಿದ್ದು. ಬರ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಎಲ್ಲಿಯೂ ಮಳೆಯ ವರದಿಯಾಗಿಲ್ಲ.