ರಾಜ್ಯ

ಬಾಡಿಗೆ ಪಾವತಿಸದ ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿಯಿಂದ ಬೀಗ

Shilpa D

ಬೆಂಗಳೂರು: ಬಾಡಿಗೆ ಕೊಡದ ಹಲವು ಸರ್ಕಾರಿ ಕಟ್ಟಡಗಳಿಗೆ ಇಂದು ಬೆಳ್ಳಂ ಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಹಲವು ವರ್ಷಗಳಿಂದ ಪಶ್ಚಿಮ ಮತ್ತು ದಕ್ಷಿಣ ವಲಯದ ಸರ್ಕಾರಿ ಕಚೇರಿಗಳು ಸುಮಾರು 6.ಕೋಟಿ ರು. ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದವು. ಜಯನಗರ 4ನೇ ಬ್ಲಾಕ್ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡವೊಂದರಿಂದಲೇ ಸುಮಾರು 4.51 ಕೋಟಿ ರು ಬಾಡಿಗೆ ಹಣ ಬರಬೇಕಾಗಿದೆ. ಅದರಲ್ಲಿ  11 ಸರ್ಕಾರಿ ಸ್ವಾಮ್ಯದ ಅಂಗಡಿಗಳಿವೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿ ಲೀಲಾವತಿ ಹೇಳಿದ್ದಾರೆ.

ಕಳೆದ 2007 ರಿಂದ ಇದುವರೆಗೂ ಒಂದು ನಯಾಪೈಸೆ ಬಾಡಿಗೆ ಹಣ ಪಾವತಿಸಿಲ್ಲ,. ಹಲವು ಬಾರಿ ನೋಟಿಸ್ ನೀಡಿದ್ದರೂ ಹಣ ಪಾವತಿ ಮಾಡಿಲ್ಲ. ಸಣ್ಣ ನೀರಾವರಿ ಕಚೇರಿ ಸಿಬ್ಬಂದಿ ಹಣ ಪಾವತಿಸುವುದಾಗಿ ಲಿಖಿತವಾಗಿ ಬರೆದು ಕೊಟ್ಟಿರುವುದರಿಂದ ಅದೊಂದದು ಕಟ್ಟಡ ಬಿಟ್ಟು ಉಳಿದ ಎಲ್ಲ  ಕಚೇರಿಗಳಿಗೂ ಬೀಗ ಜಡಿದಿರುವುದಾಗಿ ಅವರು ತಿಳಿಸಿದ್ದಾರೆ.

ಪಶ್ಚಿಮ ವಲಯದ ಯಶವಂತಪುರ ಕಾಂಪ್ಲೆಕ್ಸ್ ನಲ್ಲಿರುವ ಆರ್ ಟಿಓ ಕಚೇರಿ, ತೂಕ ಮತ್ತು ಮಾಪನ ಇಲಾಖೆ ಸೇರಿಹಲವು ಭಾಗಗಳಲ್ಲಿಬಾಡಿಗೆ ಪಾವತಿಸದ ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಕಳೆದ ಎರಡು ವರ್ಷಗಳಿಂದ ಸುಮಾರು 1 ಕೋಟಿ ರು. ಹಣ ಪಾವತಿಸಬೇಕಿದೆ ಎಂದು ಹೇಳಿದ್ದಾರೆ.

ಸುಮಾರು 25 ಸದಸ್ಯರಿಂದ ಬಿಬಿಎಂಪಿ ಅಧಿಕಾರಿಗಳ ತಂಡ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿತು. ಉಪ್ಪಾರ ಪೇಟೆ ಪೊಲೀಸ್ ಠಾಣೆಯ ಸುಭಾಷ್ ನಗರದಲ್ಲಿದ್ದ ಲಿಡ್ಕರ್, ಬಿಎಸ್ ಎನ್ ಎಲ್, ಕಾವೇರಿ ಹ್ಯಾಂಡಿಕ್ರಾಪ್ಟ್ ಮತ್ತು ಪ್ರಿಯದರ್ಶಿನಿ ಕಚೇರಿಗಳಿಂದ ಸುಮಾರು 40 ಲಕ್ಷ ಹಣ ಬಾಕಿ ನೀಡದ ಹಿನ್ನೆಲೆಯಲ್ಲಿ ಈ ಎಲ್ಲಾ ಕಚೇರಿಗಳಿಗೆ ಬೀಗ ಹಾಕಲಾಗಿದೆ.

SCROLL FOR NEXT