ಬೀದಿನಾಯಿ ದಾಳಿಗೆ ಸಿಲುಕಿ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ರಮ್ಯಾ
ಬೆಂಗಳೂರು: ಆಟವಾಡುತ್ತಿದ್ದ ಬಾಲಕಿಯ ಮೇಲೆ 10 ಬೀದಿನಾಯಿಗಳು ಎರಗಿದ್ದು, ಆಕೆಯನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಉಳ್ಲಾಲ ರಸ್ತೆಯಲ್ಲಿರುವ ಅಂಜನಾನಗರದಲ್ಲಿ ಶುಕ್ರವಾರ ನಡೆದಿದೆ.
6 ವರ್ಷದ ರಮ್ಯಾ ಮೇಲೆ ಹತ್ತು ಬೀದಿ ನಾಯಿಗಳು ಎರಗಿವೆ. ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಾಯಿಗಳ ದಾಳಿಗೆ ಬಾಲಕಿಯ ಬಲಕಿವಿ ಹರಿದುಹೋಗಿದೆ. ತೊಡೆ ಮಾಂಸಖಂಡ ಕಿತ್ತುಬಂದಿದ್ದು, ದೇಹದ ಹಲವೆಡೆ ಪರಚಿದ ಗಾಯಗಳಾಗಿವೆ. ಆಕೆಯನ್ನು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಗೆ ದಾಖಲಿಸಲಾಗಿದೆ.
ನನ್ನ ಮಕ್ಕಳಿಬ್ಬರು ಮನೆ ಸಮೀಪದಲ್ಲಿ ಆಟವಾಡುತ್ತಿದ್ದರು. ಈ ವೇಳೆ 10 ಬೀದಿನಾಯಿಗಳು ಅಲ್ಲೆ ಇದ್ದ ನಾಲ್ಕು ಕುರಿಮರಿ ಮತ್ತು ಒಂದು ಕರುವಿನ ಮೇಲೆ ಎರಗಿ ಕಚ್ಚಿ ಸಾಯಿಸಿವೆ. ಇದನ್ನು ನೋಡಿ ಹೆದರಿ ನನ್ನ ಮಕ್ಕಳಿಬ್ಬರು ಓಡಿ ಬಂದಿದ್ದಾರೆ. ದೊಡ್ಡ ಮಗಳಿಗೆ 8 ವರ್ಷಗಳಾಗಿದ್ದು ಆಕೆ ನಾಯಿಯಿಂದ ತಪ್ಪಿಸಿಕೊಂಡಿದ್ದಾಳೆ. ರಮ್ಯಾಳ ಮೇಲೆ ಎರಗಿದ ನಾಯಿಗಳು ಆಕೆಗೂ ಕಚ್ಚಿವೆ ಎಂದು ಬಾಲಕಿಯ ತಂದೆ ರಾಮೇಗೌಡ ತಿಳಿಸಿದ್ದಾರೆ.