ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಡವರಿಗೆ ಉಚಿತವಾಗಿ ಔಷಧ ಮತ್ತು ಚಿಕಿತ್ಸೆ ನೀಡಲು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದ ಅನುದಾನ ದುರ್ಬಳಕೆಯಾಗಿದ್ದು, 1463 ಕೋಟಿ ರೂ. ಅವ್ಯಹಾರ ನಡೆದಿದೆ ಎಂದು ಮಾಜಿ ಕಾರ್ಪೋರೇಟರ್ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್.ಆರ್ ರಮೇಶ್ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿರುವ ಔಷಧಗಳನ್ನು 10ರಿಂದ 15 ಪಟ್ಟು ದುಬಾರಿ ಬೆಲೆಗೆ ಖರೀದಿಸಲಾಗಿದೆ. ಆಸ್ಪತ್ರೆಗೆ ಸರಬರಾಜು ಮಾಡಲಾಗಿರುವ ವೈದ್ಯ ಉಪಕರಣಗಳು, ತಜ್ಞ ವೈದ್ಯರ ನೇಮಕದಲ್ಲೂ ಅಕ್ರಮ ಎಸಗಲಾಗಿದೆ. ಇದರಲ್ಲಿ ಇಲಾಖೆ ಹಿರಿಯ ಅಧಿಕಾರಿಗಳು, ಆರೋಗ್ಯ ಸಚಿವರು ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ.
ಹಗರಣದಲ್ಲಿ ಸಚಿವ ಯು.ಟಿ.ಖಾದರ್, ಐಎಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್, ಪಿ.ಎಸ್.ವಸ್ತ್ರದ್, ಸೌಜನ್ಯ, ಚಂದ್ರಶೇಖರ್ ಹಾಗೂ ಬಿಬಿಎಂಪಿ ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.
''ಕೇಂದ್ರದ ಸೂಚನೆಯಂತೆ ಸರಕಾರವು 'ರಾಜ್ಯ ಆರೋಗ್ಯ ಅಭಿಯಾನ ಮಂಡಳಿ' ರಚಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಅಧ್ಯಕ್ಷರಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೇ ಸಹ ಅಧ್ಯಕ್ಷರು. ನೂರಾರು ಕೋಟಿ ಹಗರಣದಲ್ಲಿ ಯು.ಟಿ.ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಕ್ತ ಪಿ.ಎಸ್.ವಸ್ತ್ರದ್, ರಾಜ್ಯ ಆರೋಗ್ಯ ಅಭಿಯಾನದ ನಿರ್ದೇಶಕಿ ಸೌಜನ್ಯ, ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ಸೊಸೈಟಿ ಮುಖ್ಯ ಆಡಳಿತಾಧಿಕಾರಿ ಚಂದ್ರಶೇಖರ್, ರಾಜ್ಯ ಆರೋಗ್ಯ ಅಭಿಯಾನದ ಮುಖ್ಯ ಆಡಳಿತಾಧಿಕಾರಿ ವಿಜಯಲಕ್ಷ್ಮಿ ಸೇರಿದಂತೆ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ,'' ಎಂದು ಆರೋಪಿಸಿರುವ ಅವರು, ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಎಸಿಬಿಗೆ ರಮೇಶ್ ದೂರು ಸಲ್ಲಿಸಿದ್ದಾರೆ.
ಮಾಗಡಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯು ಬಿಬಿಎಂಪಿಯ 6 ರೆಫರಲ್ ಆಸ್ಪತ್ರೆಗಳು, 27 ಹೆರಿಗೆ ಆಸ್ಪತ್ರೆಗಳು ಮತ್ತು 38 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಔಷಧಗಳನ್ನು ಪೂರೈಸುತ್ತಿದೆ. 2015-16ನೇ ಸಾಲಿನಲ್ಲಿ ಸೊಸೈಟಿಗೆ ಔಷಧ ಪೂರೈಕೆಗಾಗಿ 44,04,31,902 ರೂ. ಬಿಡುಗಡೆ ಮಾಡಲಾಗಿದೆ. ಇಷ್ಟು ಮೊತ್ತದ ಔಷಧಗಳನ್ನು ರೋಗಿಗಳಿಗೆ ಉಚಿತವಾಗಿ ನೀಡಲಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಿ ವಂಚನೆ ಎಸಗಲಾಗಿದೆ ಎಂದು ಆರೋಪಿಸಿದರು.
ಸೊಸೈಟಿಯು 82 ಔಷಧ ತಯಾರಿಕೆ ಕಂಪನಿಗಳಿಗೆ ಔಷಧ ಪೂರೈಕೆಯ ಗುತ್ತಿಗೆ ನೀಡಿದೆ. ಇದರಲ್ಲಿ 15 ಕಂಪನಿಗಳು ಅಸ್ತಿತ್ವದಲ್ಲೇ ಇಲ್ಲ. ಉಳಿದವು ಅತ್ಯಂತ ಕಳಪೆ ಗುಣಮಟ್ಟದ ಔಷಧ ತಯಾರಿಕೆ ಕಂಪನಿಗಳಾಗಿವೆ. ಔಷಧದ ನೈಜ ದರಕ್ಕಿಂತ 14ರಿಂದ 15 ಪಟ್ಟು ಜಾಸ್ತಿ ಹಣ ನೀಡಿ ಖರೀದಿ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ 1463 ಕೋಟಿ ರೂ.ಗಳಲ್ಲಿ ಶೇ. 25ರಷ್ಟು ಹಣವನ್ನು ಸಹ ನ್ಯಾಯಯುತವಾಗಿ ಬಳಕೆ ಮಾಡಿಲ್ಲ. ಈ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಮೂಲಕ 4 ಸಾವಿರ ಪುಟಗಳ ದಾಖಲೆ ಸಂಗ್ರಹಿಸಲಾಗಿದೆ. ಅಕ್ರಮದ ಬಗ್ಗೆ ದಾಖಲೆಗಳ ಸಮೇತ ಸಿಎಂಗೆ ಪತ್ರ ಬರೆದಿದ್ದೇನೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿವರಿಸಿದ್ದಾರೆ.