ಬೆಂಗಳೂರು: ಎನ್ ಜಿಒಗಳೆಂದು ಹೇಳಿಕೊಂಡು ಮನೆ ಕೆಲಸಕ್ಕಾಗಿ ಆನ್ ಲೈನ್ ನಲ್ಲಿ ಸಹಾಯಕಿಯರನ್ನು ಹುಡುಕುವ ಮಹಿಳೆಯರಿಗೆ ವಂಚಿಸುವ ಹೊಸ ಜಾಲವೊಂದು ಸೃಷ್ಟಿಯಾಗಿದೆ.
ಮನೆಕೆಲಸಕ್ಕೆ ಸಹಾಯಕಿ ಬೇಕಾಗಿದ್ದಾರೆ ಎಂದು ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ರೇಖಾ (ಹೆಸರು ಬದಲಾಯಿಸಲಾಗಿದೆ)ಎಂಬುವರು OLX ನಲ್ಲಿ ಮೇ 17 ರಂದು ಜಾಹೀರಾತು ಹಾಕಿದ್ದರು.
ಜಾಹೀರಾತು ಹಾಕಿದ ಮರುದಿನವೇ ಮಹಾರಾಷ್ಟ್ರದ ಮೂಲದ ಎನ್ ಜಿಒ ಎಂದು ಹೇಳಿಕೊಂಡು ಎಸ್ ಎಲ್ ವಿ ಸರ್ವೀಸ್ ಎಂಬ ಹೆಸರಿನಲ್ಲಿ ರಘು ಎಂಬಾತ ಕರೆ ಮಾಡಿದ್ದಾನೆ.
ಬುಡಕಟ್ಟು ಮಹಿಳೆಯರ ಪರವಾಗಿ ತಾವು ಕೆಲಸ ಮಾಡುತ್ತಿದ್ದು, ಮನೆಗೆಲಸಕ್ಕೆ ಸಹಾಯಕಿಯನ್ನು ಕಳುಹಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ರೇಖಾ ತಮ್ಮ ಮನೆಯ ವಿಳಾಸ ನೀಡಿ ಬರುವಂತೆ ತಿಳಿಸಿದ್ದಾರೆ.
ಮನೆಗೆ ಬಂದ ರಘು ಸಹಾಯಕಿಗೆ 8ಸಾವಿರ ಸಂಬಳ ನೀಡಬೇಕೆಂದು ಹೇಳಿದ್ದಾನೆ. ಜೊತೆಗೆ ಕಮಿಷನ್ ಕೂಡ ನೀಡುವಂತೆ ಕೇಳಿದ್ದಾನೆ.ಜೊತೆಗೆ ಮೊದಲ ತಿಂಗಳ ಸಂಬಳ ನೀಡುವಂತೆ ಕೇಳಿದಾಗ ರೇಖಾ ಅಮುಮಾನಪಟ್ಟು, ಕಂಪನಿಯ ಗುರುತಿನ ಚೀಟಿ ಕೇಳಿದ್ದಾರೆ.
ಅದರಲ್ಲಿ ಕತ್ರಿಗುಪ್ಪೆ ವಿಳಾಸ ಇದ್ದುದ್ದಿ ಕಂಡು ಬಂದಿದೆ. ಈ ವೇಳೆ ರಘು ಸಂದೇಶ್ ಎಂಬಾತನನ್ನು ಕರೆದಿದ್ದಾನೆ. ತಮ್ಮ ಕಂಪನಿಯ ಸೇವೆಯಿಂದ ಅವರು ಸಂತೃಪ್ತರಾಗಿರವ ಗ್ರಾಹಕ ಎಂದು ಪರಿಚಯ ಮಾಡಿಸಿದ್ದಾನೆ. ಇದನ್ನು ನಂಬಿದ ರೇಖಾ 6.000 ರೂ. ಅಡ್ವಾನ್ಸ್ ಆಗಿ ನೀಡಿ, ಉಳಿದ 2 ಸಾವಿರ ರು. ಗಳನ್ನು ಸಂಜೆ ಸಹಾಯಕಿಯ ಕೈಗೆ ನೀಡುವುದಾಗಿ ತಿಳಿಸಿದ್ದಾಳೆ. ಅದಕ್ಕೆ ಒಫ್ಪಿಕೊಂಡ ಆ ಇಬ್ಬರು ಅಲ್ಲಿಂದ ತೆರಳಿದ್ದಾರೆ. ಸಂಜೆಯಾದರು ಯಾರು ಬಾರದಿದ್ದಗ ಅನುಮಾನಗೊಂಡ ರೇಖಾ ಆತನಿಗೆ ಕರೆ ಮಾಡಿದ್ದಾರೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.