ಮಡಿಕೇರಿ: ಭಾಗಮಂಡಲ ಸಮೀಪದ ಕೋಪಟ್ಟಿಯ ಪಟ್ಟಿಕಾಡು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯೊಳಗೆ ಕೇರಳ ಮೂಲದ ಐಪಿಎಸ್ ಅಧಿಕಾರಿಯ ಪತ್ನಿ ಡೈಸಿ ಜೇಕಬ್ ಅವರು ಹೊಂದಿರುವ 153 ಎಕರೆ ಜಮೀನು ಮಾಲೀಕತ್ವವನ್ನು ಕೊಡಗು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದು, ಅದನ್ನು ತೆರವು ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
1991–92ರಲ್ಲಿ ರಾಮಕೃಷ್ಣ– ಕೃಷ್ಣಭಟ್ ಎಂಬುವರಿಂದ ಈ ಜಾಗವನ್ನು ಖರೀದಿಸಿದ್ದು, ಜಮೀನು ಖರೀದಿ ಹಾಗೂ ನೋಂದಣಿಯಾಗಿರುವ ಬಗ್ಗೆ ಸೂಕ್ತ ದಾಖಲೆಗಳಿವೆ ಎನ್ನಲಾಗಿದೆ.
ಪೂರ್ಣ ಜಾಗವನ್ನು ತೆರವುಗೊಳಿಸಿ ಅರಣ್ಯ ಇಲಾಖೆಗೆ ನೀಡಬೇಕು. ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೂ ಅಸಿಂಧುವಾಗಲಿವೆ ಎಂದು ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ್ ಅವರು ಅಕ್ಟೋಬರ್ 27ರಂದು ನೀಡಿರುವ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.
ಜಮೀನು ತೆರವು ಮಾಡದಿದ್ದರೆ ಅರಣ್ಯ ಇಲಾಖೆ ಕಾಯ್ದೆ 64(ಎ) ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದ್ದಾರೆ. ಹೀಗಾಗಿ, ಐಪಿಎಸ್ ಅಧಿಕಾರಿ ಪತ್ನಿಯ ಜಮೀನಿನ ಮಾಲೀಕತ್ವಕ್ಕೆ ಕುತ್ತು ಎದುರಾಗುವ ಸಾಧ್ಯತೆಯಿದೆ. ಸ್ಥಳ ಪರಿಶೀಲನೆ ನಡೆಸಿದಾಗ ಡೈಸಿ ಜೇಕಬ್ ಮಾಲೀಕತ್ವದ ಜಮೀನು ಮೀಸಲು ಅರಣ್ಯ ಪ್ರದೇಶದಲ್ಲಿ ಇರುವುದು ಪತ್ತೆಯಾಯಿತು. 1901ರಲ್ಲಿ ಪಟ್ಟಿಕಾಡು ಮೀಸಲು ಅರಣ್ಯ ಪ್ರದೇಶವೆಂದು ಘೋಷಣೆಯಾದ ಬಳಿಕ ಈ ಜಾಗ ಅರಣ್ಯ ಇಲಾಖೆಗೆ ಸೇರಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.