ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಪ್ರಯಾಣಿಕರು ತಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಪ್ರಕರಣಗಳೂ ಹೆಚ್ಚುತ್ತಿವೆ. ಆದರೆ ಈ ವರೆಗೂ ಇಂತಹ ಪ್ರಕರಣಗಳಲ್ಲಿ ಶೇ.70 ರಷ್ಟು ವಸ್ತುಗಳನ್ನು ಪ್ರಯಾಣಿಕರು ವಾಪಸ್ ಪಡೆದಿದ್ದಾರೆ. ಈ ಪೈಕಿ ಮೊಬೈಲ್ ಅತಿ ಹೆಚ್ಚು ಪತ್ತೆಯಾಗಿರುವ ವಸ್ತುಗಳಾಗಿವೆ.
ಮೆಟ್ರೋ ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಮರೆತುಹೋದ ವಸ್ತುಗಳನ್ನು ವಾಪಸ್ ಪಡೆಯಲು ಯಾರೂ ಬಾರದೇ ಇದ್ದರೆ ಅವುಗಳನ್ನು ಹರಾಜು ಹಾಕಿ ಬಂದ ಹಣವನ್ನು ಮೆಟ್ರೋ ನೌಕರರ ಕಲ್ಯಾಣ ನಿಧಿಗೆ ನೀಡಲಾಗುತ್ತದೆ, ಹರಾಜಾಗದ ವಸ್ತುಗಳನ್ನು ಚಾರಿಟಿ ಸಂಸ್ಥೆಗಳಿಗೆ ನೀಡಲಾಗುತ್ತಿದೆ.
ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ ವಸಂತ್ ರಾವ್ ಅವರು ನೀಡಿರುವ ಮಾಹಿತಿ ಪ್ರಕಾರ, ಮೆಟ್ರೋ ಪ್ರಾರಂಭವಾದ 2011 ರ ಅಕ್ಟೋಬರ್ 21 ರಿಂದ ಈ ವರೆಗೂ ನಮ್ಮ ಮೆಟ್ರೋ ರೈಲುಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಮರೆತುಹೋದ ಒಟ್ಟು 2,934 ವಸ್ತುಗಳು ಪತ್ತೆಯಾಗಿವೆ, ಈ ಪೈಕಿ 2273 ವಸ್ತುಗಳನ್ನು ಪ್ರಯಾಣಿಕರು ವಾಪಸ್ ಪಡೆದುಕೊಂಡಿದ್ದಾರೆ.
ಕಳೆದುಕೊಂಡು ವಾಪಾಸ್ ಪಡೆದಿರುವ ವಸ್ತುಗಳ ಪಟ್ಟಿಯಲ್ಲಿ ಮೊಬೈಲ್ ಗಳೇ ಹೆಚ್ಚಿದ್ದು, ಚೆಕ್, ಪಾಸ್ ಪೋರ್ಟ್, ಹ್ಯಾಂಡ್ ಬ್ಯಾಗ್, ಕನ್ನಡಕ, ಬಟ್ಟೆ, ಲ್ಯಾಪ್ ಟ್ಯಾಪ್ ಗಳನ್ನು ಸಹ ಪ್ರಯಾಣಿಕರು ಮರೆತುಹೋಗಿರುವ ಉದಾಹರಣೆಗಳಿವೆ.
ಎಂಜಿ ರಸ್ತೆ ಮೆಟ್ರೋ ಸ್ಟೇಷನ್ ನಲ್ಲಿ ಪಾಸ್ ಪೋರ್ಟ್ ನ್ನು ಕಳೆದುಕೊಂಡಿದ್ದ ಕಲ್ಯಾಣಿ ಪೂರ್ಣಾನಂದನ್ ಅವರಿಗೆ ಪಾಸ್ ಪೋರ್ಟ್ ವಾಪಸ್ ಸಿಕ್ಕಿದ್ದು, ಅದನ್ನು ಪಡೆಯಲು 15 ನಿಮಿಷಗಳು ಬೇಕಾಯಿತು. ಪಾಸ್ ಪೋರ್ಟ್ ವಾಪಸ್ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ನಮ್ಮ ಮೆಟ್ರೋ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics