ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ದಕ್ಷಿಣ ಕನ್ನಡ- ಉಡುಪಿಯಲ್ಲಿ ಕಂಬಳ ಆಯೋಜನೆಗೆ ಹೈಕೋರ್ಟ್ ಮಧ್ಯಂತರ ತಡೆ

ಸಂಪ್ರದಾಯಕ್ಕಿಂತ ಕಾನೂನು ದೊಡ್ಡದು ಎಂದು ಹೇಳಿರುವ ಹೈಕೋರ್ಟ್ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಂಬಳ ಆಯೋಜನೆಗೆ ಮಧ್ಯಂತರ...

ಹೈಕೋರ್ಟ್
Shilpa D
Updated On : 23 Nov 2016, 9:47 am

ಬೆಂಗಳೂರು: ಸಂಪ್ರದಾಯಕ್ಕಿಂತ ಕಾನೂನು ದೊಡ್ಡದು ಎಂದು ಹೇಳಿರುವ ಹೈಕೋರ್ಟ್ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಂಬಳ ಆಯೋಜನೆಗೆ ಮಧ್ಯಂತರ ತಡೆ ನೀಡಿದೆ.

ಕಂಬಳ ನಿಷೇಧ ಕುರಿತಂತೆ ಪೀಪಲ್‌ ಫಾರ್‌ ಎಥಿಕಲ್ ಟ್ರೀಟ್‌ಮೆಂಟ್‌ ಆಫ್ ಅನಿಮಲ್ಸ್‌ (ಪೆಟಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಕಂಬಳ ಓಟ ಪ್ರಾಣಿಗಳ ಮೇಲೆ ಎಸಗುವ ಹಿಂಸೆ. ಕೋಣಗಳನ್ನು ಕೃಷಿ ಚಟುವಟಿಕೆಗೆ ಹೊರತುಪಡಿಸಿ ಕಂಬಳ ಓಟದ ಉದ್ದೇಶಕ್ಕೆ ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ. ಇದರಿಂದ ಅವು ಹಿಂಸೆಗೆ ಒಳಗಾಗುತ್ತವೆ.  ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆ–1960ರ ಅನುಸಾರ ಕಂಬಳ ಆಯೋಜನೆಗೆ ತಡೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಕಂಬಳ ಓಟವು ಕರಾವಳಿ ತೀರದ ಸಾಂಪ್ರದಾಯಿಕ ಆಚರಣೆಯಾಗಿದ್ದು ಇಲ್ಲಿನ ಜನರ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಇದಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಕಂಬಳ ಕ್ರೀಡೆಯಲ್ಲಿ ಓಡಲು ಕೋಣಗಳು ದೈಹಿಕ ಸಾಮರ್ಥ್ಯ ಹೊಂದಿವೆ. ಇದಕ್ಕೆ ಹಲವು ದಾಖಲೆಗಳಿವೆ  ಎಂದು ಕಂಬಳ ಕ್ರೀಡೆ ಆಯೋಜಕರ ಪರ ಹಾಜರಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ನ್ಯಾಯಾಧೀಶರಿಗೆ ತಿಳಿಸಿದರು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಎಂ.ಆರ್.ನಾಯಕ್ ಅವರು, ‘ರಾಜ್ಯ ಸರ್ಕಾರ 2015ರ ಡಿ.17 ರಂದು ಕಂಬಳ ಕ್ರೀಡೆ ಆಯೋಜಿಸಲು ಷರತ್ತುಬದ್ಧ  ಅನುಮತಿ ನೀಡಿತ್ತು. ನಂತರ ಈ ಆದೇಶ ಹಿಂಪಡೆಯಲಾಗಿದೆ’ ಎಂದು ತಿಳಿಸಿದರು. ಪ್ರತಿವಾದಿಗಳು ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement