ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಗರದ ಕಾಲೇಜೊಂದು ಪ್ರಾಯೋಗಿಕ ಹಂತದಲ್ಲಿ ಕಾಗದರಹಿತ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.
ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಮೊನ್ನೆ ಶನಿವಾರ ಕೋರ್ ವಿಷಯಗಳಲ್ಲದ ಪದವಿಯ ಸಂವಿಧಾನ ಮತ್ತು ಪರಿಸರ ಅಧ್ಯಯನ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಪರೀಕ್ಷೆಗಳನ್ನು ಕಾಗದರಹಿತವಾಗಿ ನಡೆಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕಾಲೇಜಿನ ಮುಖ್ಯಸ್ಥರು, ಏನಾದರೊಂದು ಹೊಸತನ್ನು ಮಾಡಬೇಕೆಂಬ ಉದ್ದೇಶದಿಂದ ಟ್ಯಾಬ್ ಗಳನ್ನು ಬಳಸಿ ಕಾಗದರಹಿತ ಪರೀಕ್ಷೆಗಳನ್ನು ಮಾಡಿದ್ದೇವೆ. ಈ ನಾನ್ ಕೋರ್ ಸಬ್ಜೆಕ್ಟ್ ಗಳು ಬಹು ಆಯ್ಕೆ ಮಾದರಿಯಲ್ಲಿದ್ದರಿಂದ ಸುಲಭವಾಯಿತು ಎನ್ನುತ್ತಾರೆ.
ಇದಕ್ಕಾಗಿ ಕಾಲೇಜು ಐಪಿಒಎಂಒ ಕಂಪೆನಿ ಜೊತೆ ತಾಂತ್ರಿಕ ಸಹಾಯಕ್ಕಾಗಿ ಒಟ್ಟು ಸೇರಿದೆ. ಕಾಲೇಜಿನ ಸೂಚನೆ ಪ್ರಕಾರ, ಮೊಬೈಲ್ ಮಾರ್ಕ್ ರಿಕಗ್ನಿಶನ್ ಸಿಸ್ಟಮ್(ಎಂಎಂಆರ್) ಮೂಲಕ ಕಂಪೆನಿಯು ಪ್ರಶ್ನೆ ಪತ್ರಿಕೆಗಳನ್ನು ಅಪ್ ಲೋಡ್ ಮಾಡಿದೆ.
ಪ್ರಶ್ನೆ ಪತ್ರಿಕೆಗಳು ಎಬಿಸಿಡಿ ಸರಣಿಯಲ್ಲಿದ್ದು, ಪ್ರತಿ ವಿದ್ಯಾರ್ಥಿಗಳು ಬೇರೆ ಬೇರೆ ಸರಣಿಯ ಪ್ರಶ್ನೆ ಪತ್ರಿಕೆಗಳನ್ನು ಪಡೆಯುತ್ತಾರೆ, ಹಾಗಾಗಿ ಪರೀಕ್ಷೆಗಳಿಗೆ ಬರೆಯುವಾಗ ಅಕ್ರಮ ನಡೆಯುವುದು ಅಸಾಧ್ಯ. ಪ್ರತಿ ವಿದ್ಯಾರ್ಥಿನಿಗೆ ನಾವು ಕೋಡ್ ಕೊಡುತ್ತೇವೆ. ಅವರು ಅದನ್ನು ಸ್ಕ್ಯಾನ್ ಮಾಡಿ ನಂತರ ಪ್ರಶ್ನೆಗಳಿಗೆ ಉತ್ತರ ನೀಡಲು ಆರಂಭಿಸಬೇಕು. ಪರೀಕ್ಷೆಯ ಸಮಯ ಪ್ರಾರಂಭವಾಗುವ ಮುಂಚೆ ಟ್ಯಾಬ್ ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುತ್ತಾರೆ ಕಾಲೇಜಿನ ಹಿರಿಯ ಅಧಿಕಾರಿಯೊಬ್ಬರು.
ಟ್ಯಾಬ್ ನ್ನು ಪ್ರತಿ ವಿದ್ಯಾರ್ಥಿಗಳಿಗೆ ಕಾಲೇಜು ಒದಗಿಸುತ್ತದೆ, ಒಮ್ಮೆ ವಿದ್ಯಾರ್ಥಿ ಪ್ರಶ್ನೆಗಳಿಗೆ ಉತ್ತರಿಸುವುದು ಮುಗಿದ ನಂತರ ಕೊನೆಯಲ್ಲಿ ಸಬ್ ಮಿಟ್ ಬಟನ್ ನ್ನು ಒತ್ತಬೇಕು. ಸಬ್ ಮಿಟ್ ಮಾಡುವ ಮುಂಚೆ ವಿದ್ಯಾರ್ಥಿಗಳು ತಮಗೆ ಬೇಕೆಂದರೆ ಉತ್ತರವನ್ನು ಬದಲಾಯಿಸಲೂಬಹುದು. ವಿದ್ಯಾರ್ಥಿಗಳಿಗೆ ಕೂಡಲೇ ಫಲಿತಾಂಶ ಗೊತ್ತಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics