ಬೆಂಗಳೂರು: ಮಕ್ಕಳಿಗೆ ಸಿಹಿ ಎಂದರೇ ಆತೀವ ಪ್ರೀತಿ, ಹಾಗೆಯೇ ಚಾಕೋಲೇಟ್ ಕೊಟ್ಟರೆ ಮಕ್ಕಳು ಬೇಡ ಅನ್ನೋದೆ ಇಲ್ಲ. ಆದರೆ ಶಾಲಾ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡಿರುವ ಡ್ರಗ್ ಮಾಫಿಯಾ ಮಕ್ಕಳಿಗೆ ಚಾಕೋಲೇಟ್ಸ್ ಮೂಲಕ ಮಾದಕ ವಸ್ತು ನೀಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಗರದ ಕೆಲವು ಶಾಲೆಗಳ ಆವರಣದಲ್ಲಿ ಸ್ಟ್ರಾಬೆರಿ ಕ್ವಿಕ್ ಎಂಬ ಡ್ರಗ್ ಮಾರಾಟ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಸ್ಟ್ರಾಬೆರಿ ಕ್ವಿಕ್ ತಿನ್ನುವುದರಿಂದ ಮಕ್ಕಳು ಬಹುಬೇಗ ಡ್ರಗ್ಸ್ ಗೆ ದಾಸರಾಗುತ್ತಾರೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಆತಂಕಕ್ಕೊಳಗಾಗಿದ್ದಾರೆ.
ಶಾಲೆಯ ಹೊರಗಡೆ ಸಿಗುವ ಯಾವುದೇ ಸ್ವೀಟ್, ಚಾಕೋಲೇಟ್ಸ್ ಖರೀದಿಸದಂತೆ. ಯಾರಾದರೂ ಅಪರಿಚಿತರು ಚಾಕೋಲೇಟ್ ನೀಡಿದರೆ ತೆಗೆದುಕೊಳ್ಳಬಾರದು ಎಂದು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ಎಚ್ಚರಿಕೆ ನೀಡಿದೆ.
ಬೆಂಗಳೂರು ದಕ್ಷಿಣ ತಾಲೂಕಿನಲ್ಲಿರುವ ಹಲವು ಶಾಲೆಗಳು ಈ ಸಂಬಂಧ ಮಕ್ಕಳ ಪೋಷಕರಿಗೆ ಸುತ್ತೊಲೆ ಹೊರಡಿಸಿವೆ. ಡ್ರಗ್ಸ್ ಅಂಶವುಳ್ಳ ಸ್ಟ್ರಾಬೆರಿ ಪಾಪ್ ರಾಕ್ಸ್ ಎಂಬ ಚಾಕೋಲೇಟ್ಸ್ ಮಾರಾಟ ಮಾಡಲಾಗುತ್ತಿದ್ದು ಶಾಲಾ ಆವರಣದಲ್ಲಿ ಅಂಥವುಗಳನ್ನು ಯಾರೂ ಖರೀದಿಸಿಬಾರದೆಂದು ಸೂಚಿಸಿಲಾಗಿದೆ. ಜೊತೆಗೆ ಮಕ್ಕಳಿಗೆ ಹಣ ನೀಡಬಾರದು ಎಂದು ಸಹ ತಿಳಿಸಲಾಗಿದೆ, ಇದರಿಂದ ಮಕ್ಕಳು ಸುಲಭವಾಗಿ ಅಂಥವುಗಳನ್ನು ಕೊಂಡು ತಿನ್ನುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಲಾಗಿದೆ.
ನಮಗೆ ಇಂಥ ಸುದ್ದಿ ತಿಳಿದು ಆಘಾತವಾಗಿದೆ. ಇದು ಪೋಷಕರನ್ನು ನೋವಿಗೆ ತಳ್ಳುತ್ತಿದೆ. ಹೀಗಾಗಿ ನಾವು ಶಾಲಾ ಆವರಣದಲ್ಲಿ ಹಾಗೂ ಹೊರಗಡೆ ಅಪರಿಚಿತರು ಕೊಡುವ ಯಾವುದೇ ತಿನಿಸುಗಳನ್ನು ತಿನ್ನಬಾರದೆಂದು ಮಕ್ಕಳಿಗೆ ಹೇಳುತ್ತಿದ್ದೇವೆ ಎಂದು ಬನಶಂಕರಿ 2 ನೇ ಹಂತದಲ್ಲಿರುವ ಲಿಟಲ್ ಫ್ಲವರ್ ಶಾಲೆ ಪ್ರಾಂಶಪಾಲರಾದ ಗಾಯತ್ರಿದೇವಿ ಹೇಳಿದ್ದಾರೆ.
ಪೋಷಕರು ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡಬಾರದು. ಒಬ್ಬ ವಿದ್ಯಾರ್ಥಿ ಡ್ರಗ್ಸ್ ಗೆ ಅಡಿಕ್ಟ್ ಆದರೆ, ಅತನ ಇತರ ಸ್ನೇಹಿತರು ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಇರುತ್ತದೆ ಎಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಬೋರ್ಡ್ ಮೆಂಬರ್ ಮನ್ಸೂರ್ ಅಲಿ ಖಾನ್ ತಿಳಿಸಿದ್ದಾರೆ.
ಇದು ಸುಳ್ಳು ಸುದ್ದಿ ಎಂದು ಕೆಲ ಶಾಲೆಗಳು ಈ ವಿಷಯವನ್ನು ನಿರ್ಲಕ್ಷ್ಯಿಸಲು ನಿರ್ಧರಿಸಿವೆ. ಚಾಕೋಲೇಟ್ಸ್ ನಲ್ಲಿ ಡ್ರಗ್ಸ್ ಹಾಕಿ ಸರಬರಾಜು ಮಾಡಲಾಗುತ್ತಿದೆ ಎಂದು ಕಳೆದ ಮೂರು ನಾಲ್ಕು ತಿಂಗಳಿಂದ ವಾಟ್ಸಾಪ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಆದರೆ ಇಂತ ಸಂದೇಶಗಳ ಸತ್ಯಾಸತ್ಯಾತೆ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಡಿ ಶಶಿಕುಮಾರ್ ತಿಳಿಸಿದ್ದಾರೆ.ರಾಜ್ಯ ಆರೋಗ್ಯ ಇಲಾಖೆ ಇದರ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ.