ರಾಜ್ಯ

ಚಾಲಕರ ತಪಾಸಣೆಗೆ ಶಾಲಾ ಆಡಳಿತ ಮಂಡಳಿಯಿಂದ ಆಲ್ಕೋಮೀಟರ್ ಬಳಕೆ

Sumana Upadhyaya
ಬೆಂಗಳೂರು: ಶಾಲಾ ವಾಹನ ಚಾಲಕರು ಕುಡಿದು ಚಲಾಯಿಸಿ ಸಿಕ್ಕಿಬಿದ್ದ ಹಲವು ಪ್ರಕರಣ ನಗರದಲ್ಲಿ ನಡೆದ ನಂತರ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಆಡಳಿತ ಒಕ್ಕೂಟ, ಚಾಲಕರನ್ನು ಪರೀಕ್ಷಿಸುವ ಅಲ್ಕೋಮೀಟರನ್ನು ಬಳಸಲು ನಿರ್ಧರಿಸಿದೆ.
ಶಾಲಾ ವ್ಯಾನು ಚಾಲಕನೊಬ್ಬ ನಿನ್ನೆ ಕುಡಿದು ವಾಹನ ಚಲಾಯಿಸಿದ್ದಕ್ಕೆ ಸಿಕ್ಕಿಬಿದ್ದಿದ್ದಾನೆ. ಕಳೆದೆರಡು ತಿಂಗಳಲ್ಲಿ ಇಂತಹ 10ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸುವ ಪೋಷಕರಲ್ಲಿ ಆತಂಕವನ್ನುಂಟು ಮಾಡಿದೆ. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್, ಶಾಲೆಯ ಅಧಿಕಾರಿಗಳು ಚಾಲಕರನ್ನು ನಿಗಾವಹಿಸಲು ಸಾಧ್ಯವಾಗುವುದಿಲ್ಲ. ನಾವೇ ಹೋಗಿ ಪರೀಕ್ಷಿಸುತ್ತೇವೆ.ಇದು ಶಾಲಾ ವಾಹನ ಚಾಲಕರ ಸ್ಥಿತಿಗತಿ ಕುರಿತು ನಡೆಸುವ ಅಧ್ಯಯನ. ಚಾಲಕರು ರಾತ್ರಿ ಹೊತ್ತು ಅಥವಾ ಬೆಳಗಿನ ಜಾವ ಕುಡಿಯುತ್ತಾರೆಯೇ ಎಂದು ನಾವು ತಿಳಿಯಲು ಪ್ರಯತ್ನಿಸುತ್ತೇವೆ. ಸಂಚಾರಿ ಪೊಲೀಸರ ಜೊತೆ ಮಾತುಕತೆ ನಡೆಸಿ ಇದಕ್ಕೊಂದು ಪರಿಹಾರ ಹುಡುಕಲು ಪ್ರಯತ್ನಿಸುತ್ತೇವೆ. ಮಕ್ಕಳ ಪೋಷಕರೂ ಕೂಡ ಚಾಲಕರ ಬಗ್ಗೆ ತಿಳಿಯಲು ನಮ್ಮೊಂದಿಗೆ ಸಹಕರಿಸಬೇಕು ಎನ್ನುತ್ತಾರೆ.
ಆಲ್ಕೋಹಾಲ್ ಸೇವಿಸಿ ಶಾಲಾ ವ್ಯಾನು ಚಲಾಯಿಸಿದ ಸಿದ್ದಗಂಗಾ ಪಬ್ಲಿಕ್ ಸ್ಕೂಲ್ ನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಗಂಗಾಧರ್ ಎಂಬ ಚಾಲಕನನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 279ರಡಿ ಕೇಸು ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಆಂಬ್ಯುಲೆನ್ಸ್ ಚಲಾಯಿಸಿದ ಚಾಲಕನನ್ನು ಬಂಧಿಸಲಾಗಿತ್ತು.
ಮಾಧುರಿ ಎಂಬ ಪೋಷಕಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಈ ಪ್ರಕರಣದಲ್ಲಿ ಶಾಲಾ ಅಧಿಕಾರಿಗಳನ್ನು ಕೂಡ ಹೊಣೆಗಾರರನ್ನಾಗಿ ಮಾಡಬೇಕು ಎನ್ನುತ್ತಾರೆ. ಪ್ರಸ್ತುತ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ 2 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ. ಆದರೆ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ ಮೋಟಾರು ವಾಹನ ತಿದ್ದುಪಡಿ ಮಸೂದೆ 2016ರಲ್ಲಿ ದಂಡ ಮೊತ್ತವನ್ನು 10 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು.
SCROLL FOR NEXT