ಬೆಂಗಳೂರು/ ಮೈಸೂರು: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿಸಲಾಗಿರುವ ತಜ್ಞ ಅಧ್ಯಯನ ತಂಡ ಶನಿವಾರ ಬೆಳಗ್ಗೆ ಕೃಷ್ಣರಾಜಸಾಗರಕ್ಕೆ ಭೇಟಿ ಪರಿಶೀಲನೆ ನೀಡಿತು.
ಎರಡು ದಿನಗಳ ರಾಜ್ಯ ಭೇಟಿಯಲ್ಲಿರುವ ತಂಡ ಅಣೆಕಟ್ಟೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು. ಸುಮಾರು ಎರಡು ಗಂಟೆಯ ಕಾಲ ನೀರಿನ ಒಳ ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದುಕೊಂಡಿರುವ ತಜ್ಞರ ತಂಡ ಇಲ್ಲಿನ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿತು. ಈ ವೇಳೆ ರಾಜ್ಯದ ಅಧಿಕಾರಿಗಳು ತಜ್ಞರ ತಂಡಕ್ಕೆ ಕಾವೇರಿ ಜಲಾನಯನ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ತಜ್ಞರ ಗಮನಕ್ಕೆ ತಂದರು.
ಸಚಿವ ಎಂ.ಬಿ ಪಾಟೀಲ್ ತಂಡಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಳೆಯ ಕೊರತೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರ ಬೆಳೆ ನಾಶದಿಂದ ಉಂಟಾಗಿರುವ ವಾಸ್ತವತೆಗಳನ್ನು ತಂಡಕ್ಕೆ ವಿವರಿಸಲಾಯಿತು. ನಂತರ ಮಂಡ್ಯದ ಹಲವು ತಾಲೂಕುಗಳಿಗೆ ಭೇಟಿ ನೀಡಿದ ತಂಡ ಬೆಳೆ ನಾಶವಾಗಿರುವ, ಹೆಮ್ಮನಹಳ್ಳಿ, ತೈಲೂರು, ದೊಡ್ಡರಸಿನಕೆರೆ, ಕೊಪ್ಪ, ಹೊನ್ನೆದೊಡ್ಡಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಹಾನಿಯಾಗಿರುವ ಬೆಳೆಗಳ ಬಗ್ಗೆ ವರದಿ ಸಂಗ್ರಹಿಸಿದ್ದಾರೆ
ನಂತರ ಹಾಸನಕ್ಕೆ ಆಗಮಿಸಿದ ತಂಡ ಹೊಳೆನರಸೀಪುರ, ಅರಕಲಗೂಡಿನಲ್ಲಿ ಪರಿಶೀಲನೆ ನಡೆಸಿತು. ಗೊರೂರು ಹೇಮಾವತಿ ಜಲಾಶಯಕ್ಕೂ ಭೇಟಿ ನೀಡಿದ ತಂಡ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು. ಇಂದು ಕರ್ನಾಟಕದಲ್ಲಿ ಪರಿಶೀಲನೆ ಮುಗಿದಿದ್ದು ರಾತ್ರಿ ತಮಿಳುನಾಡಿಗೆ ಪರಿಸ್ಥಿತಿಯ ಅಧ್ಯಯನಕ್ಕಾಗಿ ತಂಡ ತೆರಳಲಿದೆ.