ರಾಜ್ಯ

ರಾಮಾಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಸ್ತಾಪವಿಲ್ಲ: ಸಿದ್ದರಾಮಯ್ಯ

Sumana Upadhyaya
ಮಂಗಳೂರು: ಹೊಸನಗರ ಶ್ರೀ ರಾಮಾಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮುಂದೆ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ. ಮಠದ ಕೆಲ ಭಕ್ತರು ಈ ಕುರಿತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ ನ್ಯಾಯಾಲಯ ನಮ್ಮ ಅಭಿಪ್ರಾಯ ಕೇಳಿದೆ. ಮುಂದಿನದ್ದು ಕಾನೂನು ತಜ್ಞರು ನೋಡಿಕೊಳ್ಳಲಿದ್ದಾರೆ ಎಂದರು. 
ಆಡಳಿತಾಧಿಕಾರಿ ನೇಮಕ ವಿಚಾರ ಕೇಳಿ ಬಂದ ಬಳಿಕ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರ ಯಾವುದೇ ಕಾರಣಕ್ಕೂ ಆಡಳಿತಾಧಿಕಾರಿ ನೇಮಕ ಮಾಡಬಾರದು. ಸ್ವಾಮೀಜಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಧಿಕಾರಿ ನೇಮಕ ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ. 
ತಮ್ಮ ಪುತ್ರ ಯತೀಂದ್ರನನ್ನು ಕ್ಷೇತ್ರದ ಜನತೆಗೆ ಪರಿಚಯಿಸಿದ್ದೇನಷ್ಟೆ. ಈ ವಿಚಾರದಲ್ಲಿ ರಾಜಕೀಯ ಅರ್ಥ ಕಲ್ಪಿಸುವುದು ಬೇಡ, ಹಿರಿಯ ಮಗ ಮಾಡಿಕೊಂಡಿದ್ದ ಕೆಲಸವನ್ನು ಕಿರಿಯ ಮಗ ಮುಂದುವರಿಸಿಕೊಂಡು ಹೋಗಲಿ ಎಂಬುದು ನನ್ನ ಆಸೆಯಷ್ಟೆ ಎಂದರು.
ಕಾವೇರಿ ನದಿ ನೀರಿನ ವಿಷಯದಲ್ಲಿ ಕೇಂದ್ರ ತಂಡಕ್ಕೆ ರಾಜ್ಯದ ಪರಿಸ್ಥಿತಿ ಅರ್ಥವಾಗಿರುವ ಹಿನ್ನಲೆಯಲ್ಲಿ ಈ ಬಾರಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.
SCROLL FOR NEXT