ಬೆಂಗಳೂರಿನ ಅನೇಕ ನಿವಾಸಿಗಳ ಸಂಘದ ಸದಸ್ಯರು ಸ್ಟೀಲ್ ಫ್ಲೈ ಓವರ್ ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸುತ್ತಿರುವುದು.
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬೊಕ್ಕಸ ಈಗಾಗಲೇ ಖಾಲಿಯಾಗಿರುವಾಗ ಬಸವೇಶ್ವರ ಸರ್ಕಲ್ ಮತ್ತು ಹೆಬ್ಬಾಳ ಮಧ್ಯೆ ಸಾವಿರದ 791 ಕೋಟಿ ರೂಪಾಯಿಗಳ ಸ್ಟೀಲ್ ಫೈ ಓವರ್ ಯೋಜನೆಗೆ ಅನುಮೋದನೆ ನೀಡಿರುವುದು ಹಣಕಾಸಿಗೆ ಮತ್ತಷ್ಟು ಕಗ್ಗಂಟಾಗಲಿದೆ.
ಬಿಡಿಎಯ ಆದಾಯ ಮತ್ತು ಫೈ ಓವರ್ ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೇಕಾದ ಹಣಕಾಸಿನ ಮಧ್ಯೆ ಭಾರೀ ಅಂತರವಿದೆ. ಮೂಲಗಳ ಪ್ರಕಾರ, 2016-17ರಲ್ಲಿ ಬಿಡಿಎಯ ಹೊಸ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಿಗೆ 5 ಸಾವಿರದ 500 ಕೋಟಿ ರೂಪಾಯಿ ಅವಶ್ಯಕತೆಯಿದೆ. ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 11 ಸಾವಿರದ 850 ಕೋಟಿ ರೂಪಾಯಿ, ಔಟರ್ ರಿಂಗ್ ರಸ್ತೆ ಅಲೈನ್ ಮೆಂಟ್ ಯೋಜನೆಗೆ 700 ಕೋಟಿ ರೂಪಾಯಿ ಮತ್ತು ಯಶವಂತಪುರದಲ್ಲಿನ ಕಾಮಗಾರಿಗೆ 131 ಕೋಟಿ ರೂಪಾಯಿ ಹಣ ಬೇಕಾಗಿದೆ. ಈಗ ನಡೆಯುತ್ತಿರುವ ಕಾಮಗಾರಿಗಳಿಗೆ 18 ಸಾವಿರದ 50 ಕೋಟಿ ರೂಪಾಯಿ ವೆಚ್ಚವಾಗಿದೆ.
ಸ್ಟೀಲ್ ಫ್ಲೈ ಓವರ್ ಗೆ ಸಾವಿರದ 800 ಕೋಟಿ ರೂಪಾಯಿ ವೆಚ್ಚ ತಗಲುವ ನಿರೀಕ್ಷೆಯಿದ್ದು ಪೂರ್ತಿ ಕಾಮಗಾರಿ ಮುಗಿಯುವ ಹೊತ್ತಿಗೆ ಮತ್ತೂ 350 ಕೋಟಿ ರೂಪಾಯಿ ಹಣ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಿಡಿಎಗೆ 20 ಸಾವಿರದ 422 ಕೋಟಿ ರೂಪಾಯಿ ಹಣ ಬೇಕಾಗಬಹುದು.
ಬಿಡಿಎ ವೆಬ್ ಸೈಟ್ ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ನಾಡಪ್ರಭು ಕೆಂಪೇಗೌಡ ಲೇ ಔಟ್ ಯೋಜನೆಯಲ್ಲಿ 5 ಸಾವಿರ ಸೈಟ್ ಗಳನ್ನು ಹಂಚಿಕೆ ಮಾಡಿದ ನಂತರ ಸಾವಿರದ 277.47 ಕೋಟಿ ರೂಪಾಯಿ ಸಿಗುವ ನಿರೀಕ್ಷೆಯಿದೆ.