ಮಂಗಳೂರು: ವಿರೋಧದ ನಡುವೆಯೂ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದು ಸ್ಟೀಲ್ ಫ್ಲೈ ಓವರ್ ಅತ್ಯಂತ ಪಾರದರ್ಶಕ ಯೋಜನೆ ಎಂದು ಹೇಳಿದ್ದಾರೆ.
ಸ್ಟೀಲ್ ಫ್ಲೈ ಓವರ್ ಬಗ್ಗೆ ವಿರೋಧ ಪಕ್ಷ ಬಿಜೆಪಿ ಆಧಾರ ರಹಿತ, ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಉಕ್ಕಿನ ಸೇತುವೆ ಯೋಜನೆಯನ್ನು ವಿರೋಧಿಸಿದ್ದ ಕೇಂದ್ರ ಸಚಿವ ಸದಾನಂದ ಗೌಡ, ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ಹೆಸರಿನಲ್ಲಿ ಸರ್ಕಾರ ಹಣಕಾಸಿನ ವ್ಯವಹಾರದಲ್ಲಿ ಮೋಸಮಾಡುತ್ತಿದೆ ಎಂದು ಆರೋಪಿಸಿ, ಯೋಜನೆಯ ಜಾರಿಯಲ್ಲಿ ಸರ್ಕಾರ ಪಾರದರ್ಶಕತೆಯನ್ನು ಪ್ರಶ್ನಿಸಿದ್ದರು. ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಆರೋಪಗಳನ್ನು ತಳ್ಳಿಹಾಕಿರುವ ಸಿಎಂ ಸಿದ್ದರಾಮಯ್ಯ, ಸುಳ್ಳು ಆರೋಪ ಮಾಡುವುದು ವಿಪಕ್ಷ ಬಿಜೆಪಿಯ ಎಂದಿನ ಕೆಲಸವಾಗಿದ್ದು ಸುಳ್ಳನ್ನು 100 ಬಾರಿ ಹೇಳುವ ಮೂಲಕ ಅದನ್ನೇ ನಿಜ ಮಾಡಲು ಹೊರಟಿದೆ ಸಿದ್ದರಾಮಯ್ಯ ಆರೋಪಿಸಿದ್ದಾರೆ.