ರಾಜ್ಯ

ಕಾವೇರಿ ವಿವಾದ, ಕನ್ನಡ ನಟರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ: ಯುವಕನಿಗೆ ಥಳಿತ

Sumana Upadhyaya
ಬೆಂಗಳೂರು: ಕಾವೇರಿ ಜಲ ವಿವಾದ ಮತ್ತು ಕನ್ನಡ ಚಲನಚಿತ್ರ ನಟರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ 22 ವರ್ಷದ ವಿದ್ಯಾರ್ಥಿಯನ್ನು ಯುವಕರ ಗುಂಪೊಂದು ಥಳಿಸಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ. 
ಶ್ರೀರಾಂಪುರದ ನಿವಾಸಿ ಸಂತೋಷ್, ಬನಶಂಕರಿಯ ಖಾಸಗಿ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಆತ ಫೇಸ್ ಬುಕ್ ನಲ್ಲಿ ಕಾವೇರಿ ವಿವಾದ ಮತ್ತು ಕನ್ನಡ ನಟರ ಬಗ್ಗೆ ಜನರನ್ನು ಕೆರಳಿಸುವ ರೀತಿಯಲ್ಲಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ. ನಿನ್ನೆ ಮಧ್ಯಾಹ್ನ ನಂತರ ಕಾಲೇಜಿಗೆ ಬಂದಿದ್ದ ಸಂತೋಷ್ ನನ್ನು ಸಾರ್ವಜನಿಕರು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.ಆಗ ಸಂತೋಷ್ ಅವರಲ್ಲಿ ಕ್ಷಮೆಯಾಚಿಸಿದನು. ಅಷ್ಟು ಹೊತ್ತಿಗೆ ಅಲ್ಲಿಗೆ ಆಗಮಿಸಿದ ಗಿರಿನಗರ ಠಾಣೆಯ ಪೊಲೀಸರು ಆಗಮಿಸಿದರು. ಆಗ ಸಂತೋಷ್ ಮತ್ತು ಯುವಕರ ಗುಂಪು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸಂತೋಷ್ ಫೇಸ್ ಬುಕ್ ನಲ್ಲಿ ನಟರಾದ ಶಿವರಾಜ್ ಕುಮಾರ್, ದುನಿಯಾ ವಿಜಯ್, ರಾಗಿಣಿ ದ್ವಿವೇದಿ ಮತ್ತು ದರ್ಶನ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನಂತೆ. ಆತನ ಸ್ನೇಹಿತರು ಫೇಸ್ ಬುಕ್ ನಲ್ಲಿ ಅಂತಹ ಹೇಳಿಕೆಗಳನ್ನು ಪೋಸ್ಟ್ ಮಾಡದಂತೆ ಎಚ್ಚರಿಕೆ ನೀಡಿದ್ದರಂತೆ. ಆದರೆ ಅವರ ಮಾತನ್ನು ಸಂತೋಷ್ ಕೇಳಲಿಲ್ಲ. 
ಕೆಲ ವರದಿಗಳ ಪ್ರಕಾರ, ಸಂತೋಷ್ ಗೆ ಹೊಡೆದ ಯುವಕರ ಗುಂಪು ಮೊದಲು ಆತನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರಂತೆ.ಆದರೆ ಪೊಲೀಸರು ಕೇಸು ದಾಖಲಿಸಿಕೊಳ್ಳಲಿಲ್ಲ. ಫೇಸ್ ಬುಕ್ ನಲ್ಲಿ ಅಂತಹ ಹೇಳಿಕೆಗಳನ್ನು ಪೋಸ್ಟ್ ಮಾಡಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದರಂತೆ. ಆದರೆ ಪೊಲೀಸರ ಮಾತುಗಳನ್ನು ಕೂಡ ಆತ ಕೇಳಲಿಲ್ಲ.
ಆದರೆ ಗಿರಿನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಸಂತೋಷ್ ನನ್ನು ಪೊಲೀಸ್ ಠಾಣೆಗೆ ಕರೆತರಲಿಲ್ಲ. ಆತನಿಗೆ ಹೊಡೆದವರ ಗುಂಪು ಕ್ಷಮೆ ಕೇಳಿದ್ದರಿಂದ ಆತ ಕೇಸು ದಾಖಲಿಸಲಿಲ್ಲ. ನಮಗೆ ಸುದ್ದಿ ವಾಹಿನಿಯೊಂದು ಆ ಸುದ್ದಿಯನ್ನು ಪ್ರಸಾರ ಮಾಡಿದಾಗಲೇ ವಿಷಯ ಗೊತ್ತಾಗಿದ್ದು ಎನ್ನುತ್ತಾರೆ.
ಈ ಘಟನೆ ಸಂಬಂಧ ಸಂತೋಷ್ ಆಗಲಿ, ಆತನಿಗೆ ಹೊಡೆದ ಯುವಕರಾಗಲಿ ಕೇಸು ದಾಖಲಿಸಿಲ್ಲ.
SCROLL FOR NEXT