ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಮತ್ತು ಮಾಜಿ ಸಂಸದೆ ನಟಿ ರಮ್ಯಾ
ಬೆಂಗಳೂರು: ಪಾಕಿಸ್ತಾನ ಮತ್ತು ಅಲ್ಲಿನ ಪ್ರಜೆಗಳನ್ನು ಹೊಗಳಿ ಮಾತನಾಡಿದ್ದ ಮಾಜಿ ಸಂಸದೆ ನಟಿ ರಮ್ಯಾ ಅವರ ಹೇಳಿಕೆಗೆ ಕೇಳಿಬರುತ್ತಿರುವ ಟೀಕೆ ಇನ್ನೂ ನಿಲ್ಲದಿರುವ ಮಧ್ಯೆ ಕಾಂಗ್ರೆಸ್ ನ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ನರಕವಲ್ಲ ಎಂಬ ಹೇಳಿಕೆಗೆ ರಮ್ಯಾ ಅವರು ಅನೇಕ ಟೀಕೆ, ವಿರೋಧವನ್ನು ಎದುರಿಸಬೇಕಾಯಿತು. ಹಾಗಾದರೆ ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲವೇ? ಒಬ್ಬರು ತಮಗನಿಸಿದ್ದನ್ನು ಹೇಳಲು ಸ್ವಾತಂತ್ರ್ಯ ಇಲ್ಲಿ ಇಲ್ಲ ಎಂದಾಯಿತು. ನಾನು 5ಕ್ಕಿಂತ ಹೆಚ್ಚು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದೇನೆ ಅಲ್ಲಿ ನನಗೆ ಉತ್ತಮ ಸ್ನೇಹಿತರು ಸಿಕ್ಕಿದ್ದಾರೆ. ನನಗೆ ಅದು ಕೆಟ್ಟ ದೇಶ ಅನಿಸಲಿಲ್ಲ. ಪಾಕಿಸ್ತಾನವನ್ನು ನರಕವಲ್ಲ ಎಂದು ರಮ್ಯಾ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ'' ಎಂದು ಹೇಳಿದರು.
ಇತ್ತೀಚೆಗೆ ತಾವು ಬರೆದ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಟೀಕೆ ಮಾಡಿ ಸುದ್ದಿಯಾಗಿದ್ದ ಮಾರ್ಗರೇಟ್ ಆಳ್ವಾ, ''ವಿದ್ಯಾರ್ಥಿಗಳು ಸರಿ ಯಾವುದು, ತಪ್ಪು ಯಾವುದು ಎಂದು ಹೇಳಲು ಧೈರ್ಯ ಬೆಳೆಸಿಕೊಳ್ಳಬೇಕು. ಭಾರತದ ನಾಗರಿಕರ ದೇಶಭಕ್ತಿಯ ಬಗ್ಗೆ ಸಮಾಜದ ಒಂದು ವರ್ಗ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಸಮಾಜದ ಏಳಿಗೆಯನ್ನು ಬಯಸುವ ದೇಶ ಭಕ್ತಿ ಬೆಳೆಸುವ ಭಾವೀ ಪ್ರಜೆಗಳನ್ನು ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ'' ಎಂದು ಹೇಳಿದರು.
''ನಾನು ಶಾಲೆಗೆ ಹೋಗುತ್ತಿದ್ದಾಗ ಬೇರೆಯವರು, ದೊಡ್ಡವರು ಹೇಳಿದ್ದನ್ನು ಕೇಳಬೇಕಾಗುತ್ತಿತ್ತು, ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಆದರೆ ಯಾವಾಗ ನೀವು ಪ್ರಶ್ನೆ ಮಾಡಲು ಹೊರಡುತ್ತೀರೋ ಆಗ ನಿಮ್ಮಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ಶೋಷಣೆಗಳನ್ನು ವಿದ್ಯಾರ್ಥಿಗಳು ಪ್ರಶ್ನಿಸಬೇಕು'' ಎಂದ ಆಳ್ವಾ, ನಮ್ಮ ದೇಶದಲ್ಲಿ ಯುವಜನತೆಯ ಅಭಿಪ್ರಾಯಗಳನ್ನು ತುಳಿಯಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.