ಬೆಂಗಳೂರು: ರಾಜಗೋಪಾಲನಗರ ಸಮೀಪ ಹೆಗ್ಗನಹಳ್ಳಿಯಲ್ಲಿ ಇಂದು ಮತ್ತೆ ಹಿಂಸಾಚಾರ, ಗಲಭೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು 30 ಮಂದಿಯನ್ನು ಬಂಧಿಸಿದ್ದಾರೆ.
ನಗರ ಪೊಲೀಸರು ಕೇಂದ್ರ ಮೀಸಲು ಪೊಲೀಸ್ ಪಡೆಯೊಂದಿಗೆ ಇಂದು ಬೆಳಗ್ಗೆ ಆ ಪ್ರದೇಶದಲ್ಲಿ ಶಾಂತಿ ಮೆರವಣಿಗೆ ಹಮ್ಮಿಕೊಂಡಿತ್ತು. ಹೆಗ್ಗನಹಳ್ಳಿ ಸೇರಿದಂತೆ ಅನೇಕ ಹಿಂಸಾಪೀಡಿತ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ.
ನಿನ್ನೆಯ ಗಲಭೆಯ ಕೇಂದ್ರಬಿಂದುವಾಗಿದ್ದ ಮೈಸೂರು ರಸ್ತೆಯಲ್ಲಿ ಇಂದು ಕೂಡ ಪರಿಸ್ಥಿತಿ ಸೂಕ್ಷ್ಮವಾಗಿದೆ. ಸಂಚಾರ ದಟ್ಟಣೆ ತೀರಾ ವಿರಳವಾಗಿದ್ದು, ಅಲ್ಲಲ್ಲಿ ಖಾಸಗಿ ವಾಹನಗಳು ಮತ್ತು ಜನರ ಸಂಚಾರ ಕಂಡುಬರುತ್ತಿದೆ. ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ನಗರದ ಹಲವು ಭಾಗಗಳು ಇನ್ನೂ ಕರ್ಫ್ಯೂ ಪೀಡಿತವಾಗಿದ್ದು, ನಾಳೆ ರಾತ್ರಿಯವರೆಗೆ ಅದು ಮುಂದುವರಿಯಲಿದೆ.