ಬೆಂಗಳೂರು: ಸುಪ್ರೀಂ ತೀರ್ಪಿನಿಂದ ನಗರದಲ್ಲಿ ಭುಗಿಲೆದ್ದಿದ್ದ ಕಾವೇರಿ ಗಲಾಟೆಯಲ್ಲಿ ಅಮಾಯಕ ಜೀವಗಳು ಸಂಕಷ್ಟದಲ್ಲಿ ಜೀವನ ಕಳೆಯುವಂತೆ ಮಾಡಿದೆ.
ಕಾವೇರಿ ನದಿ ನೀರು ಹಂಚಿಕೆ ಹಿನ್ನೆಲೆ ರಾಜ್ಯದ ವಿರುದ್ಧ ಸುಪ್ರೀಂ ನೀಡಿದ್ದ ತೀರ್ಪು ರಾಜ್ಯದಾದ್ಯಂತ ಉದ್ವಿಗ್ನ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಹೆಗ್ಗನಹಳ್ಳಿಯಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ಜನತೆಯಲ್ಲಿ ಸಾಕಷ್ಟು ಭೀತಿಯನ್ನು ಸೃಷ್ಟಿಸಿತ್ತು. ಗುಂಡಿನ ದಾಳಿಯಿಂದಾಗಿ ಈ ವರೆಗೂ ಇಬ್ಬರು ಸಾವನ್ನಪ್ಪಿದ್ದಾರೆ. 4 ಮಂದಿ ಗಂಭೀರವಾಗಿ ಗಾಯಗೊಂಡು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಡದ ತಪ್ಪಿಗೆ ಶಿಕ್ಷೆ ಎಂಬಂತೆ ಕಾವೇರಿ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ನಲ್ಲಿ ಇದೀಗ ಅಮಾಯಕ ಜೀವಗಳು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಗೋಲಿಬಾರ್ ನಲ್ಲಿ ಗೆಳೆಯನೊಬ್ಬನನ್ನು ಭೇಟಿಯಾಗಲು ಹೋಗುತ್ತಿದ್ದ ಪ್ರದೀಪ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರದೀಪ್ ಅವರ ಬಲ ತೊಡೆ ಭಾಗಕ್ಕೆ ಗುಂಡು ನುಗ್ಗಿದ್ದು, 48 ಗಂಟೆಗಳವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಪ್ರದೀಪ್ ಅವರು ಕುಣಿಗಲ್ ತಾಲೂಕಿನ ಮಡಿಹಳ್ಳಿಯ ನಿವಾಸಿಯಾಗಿದ್ದು, ಗೋಲಿಬಾರ್ ನಡೆದ ವೇಳೆ ಕೆಲಸ ಮುಗಿಸಿ ಮನೆಗೆ ಬಂದಿದ್ದ, ನಂತರ ಪಕ್ಕದ ರಸ್ತೆಯಲ್ಲಿಯೇ ಇದ್ದ ತನ್ನ ಗೆಳೆಯನನ್ನು ಭೇಟಿಯಾಗಲೆಂದು ಹೊರ ಹೋಗಿದ್ದ. ಗೋಲಿಬಾರ್ ನಡೆಯುತ್ತಿದ್ದ ವಿಚಾರ ಆತನಿಗೆ ತಿಳಿದಿರಲಿಲ್ಲ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಆತನ ತೊಡೆಗೆ ಗುಂಡು ನುಗ್ಗಿತ್ತು. ಅಮಾಯಕರ ಮೇಲೆ ಗುಂಡು ಹಾರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರದೀಪ್ ಅವರ ಸಹೋದರ ಮಹೇಶ್ ಅವರು ಹೇಳಿದ್ದಾರೆ.
ಪ್ರದೀಪ್ ಅವರ ಸ್ಥಿತಿ ಕುರಿತಂತೆ ವೈದ್ಯರು ಮಾತನಾಡಿದ್ದು, ರೋಗಿಯ ಬಲ ತೊಡೆಗೆ ಗುಂಡು ನುಗ್ಗಿ, ನಂತರ ಎಡ ತೊಡೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮಧ್ಯರಾತ್ರಿ 2 ಗಂಟೆವರೆಗೂ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ತೊಡೆಯೆಲುಬಿನ ಅಪಧಮನಿ ಹಾನಿಗೊಂಡಿದೆ. ಶಸ್ತ್ರಚಿಕಿತ್ಸೆ ನಡೆಸಿದ ಭಾಗದಲ್ಲಿ ಸೋಂಕು ಉಂಟಾಗಿದ್ದೇ ಆದರೆ, ಪ್ರದೀಪ್ ಅವರು ಅಂಗ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಸ್ತುತ ಅವರನ್ನು ಐಸಿಯುವಿನಲ್ಲಿ ಇಡಲಾಗಿದೆ. 48 ಗಂಟೆಗಳವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಹೇಶ್ ಅವರ ಗೆಳೆಯ ವೆಂಕಟೇಶ್ ಅವರು ಕೆಂಪೇಗೌಡ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿದ್ದು, ಗುಂಡು ತಗುಲಿದ ನಂತರದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಘಟನೆ ನಂತರ 108 ಆ್ಯಂಬುಲೆನ್ಸ್ ಕರೆ ಮಾಡಲಾಗಿತ್ತು. ಆದರೆ, ಈ ವೇಳೆ ಎಲ್ಲಾ ಕರೆಗಳು ಕಾರ್ಯನಿರತವಾಗಿದ್ದವು. ನಂತರ ಆಸ್ಪತ್ರೆಯ ಆ್ಯಂಬುಲೆನ್ಸ್ ನ್ನೇ ತೆಗೆದುಕೊಂಡು ಹೋಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರದೀಪ್ ಸ್ಥಿತಿ ಹೀಗಿದ್ದರೂ, ಯಾವೊಬ್ಬ ಸರ್ಕಾರಿ ಅಧಿಕಾರಿಗಳು ಭೇಟಿಯಾಗಲು ಬಂದಿಲ್ಲ. ಆಸ್ಪತ್ರೆಯ ಖರ್ಚುವೆಚ್ಚವನ್ನೆಲ್ಲ ಕುಟುಂಬಸ್ಥರೇ ನೋಡಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.
ಗೋಲಿಬಾರ್ ವೇಳೆ ರಾಜೇಶ್ (33) ಎಂಬುವವರು ಗಾಯಗೊಂಡಿದ್ದು, ಇದೀಗ ಅವರು ರಾಜಾಜಿನಗರದಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂಗಿಯನ್ನು ಕರೆದುಕೊಂಡು ಬರುವ ಸಲುವಾಗಿ ರಾಜೇಶ್ ಹೆಗ್ಗನಹಳ್ಳಿಯಲ್ಲಿರುವ ತನ್ನ ಮನೆಯಿಂದ ಕೆಪಿ. ಅಗ್ರಹಾರಕ್ಕೆ ಹೋಗುತ್ತಿದ್ದ. ಸಂಜೆ 6.20ರ ಸುಮಾರಿಗೆ ಮನೆಯಿಂದ ಹೊರಬಂದಾಗ ಗುಂಡು ಹಾರಿತ್ತು. ಗೋಲಿಬಾರ್ ನಡೆಯುತ್ತಿರುವ ವಿಚಾರ ಆತನಿಗೆ ತಿಳಿದಿರಲಿಲ್ಲ. ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ರಾಜೇಶ್ ಅವರೇ ನಿಭಾಯಿಸುತ್ತಿದ್ದು, 5 ತಿಂಗಳ ಹಾಗೂ 7 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆಂದು ರಾಜೇಶ್ ಗೆಳೆಯ ರಾಮು ಎಂಬುವವರು ಹೇಳಿದ್ದಾರೆ.