ರಾಜ್ಯ

ಕಾವೇರಿಗಾಗಿ ರೈಲು ಬಂದ್; ಮಂಡ್ಯದಲ್ಲಿ ರೈಲು ತಡೆಯಲೆತ್ನಿಸಿದ 6 ಮಂದಿ ವಶಕ್ಕೆ

Srinivasamurthy VN

ಮಂಡ್ಯ: ಕಾವೇರಿ ನದಿ ನೀರಿಗಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಗುರುವಾರ ಕನ್ನಡಪರ ಕರೆ ನೀಡಿರುವ ರೈಲ್ ರೋಕೋ ಚಳವಳಿಯಲ್ಲಿ ಭಾಗಿಯಾಗಿದ್ದ 6  ಮಂದಿ ಕನ್ನಡಪರ ಹೋರಾಟಗಾರರನ್ನು ಮಂಡ್ಯದಲ್ಲಿ ವಶಕ್ಕೆ ಪಡೆಯಲಾಗಿದೆ.

ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರೈಲ್ ರೋಕೋ ಚಳವಳಿ ನಿಮಿತ್ತ ಇಂದು ಮಂಡ್ಯ ರೈಲು ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ 6 ಮಂದಿ ಕನ್ನಡಪರ  ಹೋರಾಟಗಾರರನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿ ನಿಲ್ದಾಣ ಪ್ರವೇಶಕ್ಕೆ ಕಾರ್ಯಕರ್ತರು ಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ  ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ನಿಲ್ದಾಣದ ಆವರಣ ಪ್ರವೇಶಿಸಿದ ಪ್ರತಿಭಟನಾಕಾರರನ್ನು ಅಲ್ಲಿಯೇ ತಡೆದ ಪೊಲೀಸರು ಅವರನ್ನು ವಶಕ್ಕೆ  ಪಡೆದಿದ್ದಾರೆ.

ಇನ್ನು ಕೋಲಾರದಲ್ಲಿಯೂ ರೈಲ್ ರೋಕೊ ಚಳವಳಿಗೆ ಚಾಲನೆ ನೀಡಲಾಗಿದ್ದು, ಕೋಲಾರ ರೈಲ್ವೇ ನಿಲ್ದಾಣದ ಬಳಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ. ನೂರಾರು  ಸಂಖ್ಯೆಯಲ್ಲಿರುವ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕೋಲಾರ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಸಿಎಂ ಜಯಲಲಿತಾ  ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಇದಲ್ಲದೆ ಮೈಸೂರು, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

SCROLL FOR NEXT