ರಾಜ್ಯ

10 ತಿಂಗಳ ಮಗು ಹಿಡಿದು ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆ

Manjula VN

ಬೆಳಗಾವಿ: ಹಿರಿಯ ಅಧಿಕಾರಿಗಳು ಸೂಚನೆ ಮೇರೆಗೆ ಮಹಿಳಾ ಪೇದೆಯೊಬ್ಬರು ಸಂಕಷ್ಟದಲ್ಲಿ ತಮ್ಮ 10 ತಿಂಗಳ ಮಗುವೊಂದನ್ನು ಹೊತ್ತು ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಗಲಾಟೆ ವೇಳೆ ಕರ್ತವ್ಯಕ್ಕೆ ಹಾಜರಾಗಿರುವ ಘಟನೆ ನಡೆದಿದೆ.

ಚಿತ್ರದುರ್ಗ ಮೂಲದ ಮಮತಾ (32) ಎಂಬುವವರು ಚಿಕ್ಕಜಾಜುರ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಳಗಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮವಿದ್ದರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮನೆಯಲ್ಲಿ ಮಗು ಇರುವುದರಿಂದ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ದಾರಿ ಇಲ್ಲದೆ ಮಗುವನ್ನು ಹೊತ್ತು ಕರ್ತವ್ಯಕ್ಕೆ ಹಾಜರಾದೆ ಎಂದು ಪೇದೆ ಮಮತಾ ಹೇಳಿದ್ದಾರೆ.

ಸ್ಥಳದಲ್ಲಿ 100ಕ್ಕೂ ಹೆಚ್ಚು ಮಹಿಳಾ ಪೇದೆಗಳನ್ನು ನಿಯೋಜಿಸಲಾಗಿತ್ತು. ವಿಶ್ರಾಂತಿ ಪಡೆಯಲು ಹಾಗೂ ಮಗುವಿಗೆ ಹಾಲು ಕುಡಿಸಲು ಕೂಡ ಅಲ್ಲಿ ಸ್ಥಳವಿರಲಿಲ್ಲ. ರಸ್ತೆ ಮಧ್ಯೆಯೇ ಮಗುವಿಗೆ ಹಾಲುಣಿಸಿದ್ದೆ. ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ದೊಡ್ಡದೊಡ್ಡ ಶಬ್ಧದಲ್ಲಿ ಹಾಡುಗಳನ್ನು ಹಾಕಿದ್ದರಿಂದ ಮಗಳು ಗೃಹನಾ ಸಾಕಷ್ಟು ಹೆದರಿದ್ದಳು. ಅಳುವುದಕ್ಕೆ ಆರಂಭಿಸಿದ್ದಳು. ಆಕೆಯನ್ನು ಸಮಾಧಾನ ಮಾಡುವುದು ಕಷ್ಟವಾಗಿ ಹೋಗಿತ್ತು ಎಂದು ಹೇಳಿದ್ದಾರೆ.

ಮಹಿಳಾ ಪೇದೆಗಳು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಶೌಚಾಲಯಗಳ ವ್ಯವಸ್ಥೆಗಳೇ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದು ಮಹಿಳಾ ಪೇದೆಗಳು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.  

ಮಹಿಳಾ ಪೇದೆಗಳ ಈ ಸಂಕಷ್ಟಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಮಹಿಳಾ ಪೇದೆಗಳಿಗೆ ಶೌಚಾಲಯಗಳ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಆಗ್ರಹಿಸಿವೆ.

SCROLL FOR NEXT