ರಾಜ್ಯ

ಕಾವೇರಿ ತೀರ್ಪಿಗೆ ಆಕ್ರೋಶ: ಮಂಡ್ಯದಲ್ಲಿ ಹೆಚ್ಚಿದ ಪ್ರತಿಭಟನಾ ಕಿಚ್ಚು

Manjula VN

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ಆಕ್ರೋಶಕ್ಕೆ ಕಾರಣವಾಗಿದ್ದು, ನಿನ್ನೆ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ನಡೆಸಿದ್ದ ಪ್ರತಿಭಟನೆ ಮಂಡ್ಯ ಜನತೆಯ ಜೀವನ ಅಸ್ತವ್ಯಸ್ತವಾಗುವಂತೆ ಮಾಡಿತ್ತು.

ಕಾವೇರಿ ವಿವಾದ ಕುರಿತಂತೆ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿತ್ತು. ಮೈಸೂರು-ಬೆಂಗಳೂರು ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಪ್ರತಿಭಟನೆ ವೇಳೆ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದ್ದರು.

ಪ್ರತಿಭಟನೆ ಪರಿಣಾಮ ಮಂಡ್ಯ ಜಿಲ್ಲೆಯಲ್ಲಿದ್ದ ಎಲ್ಲಾ ಸಿನಿಮಾ ಥಿಯೇಟರ್ ಗಳನ್ನು ಮುಚ್ಚಲಾಗಿತ್ತು, ವ್ಯವಹಾರ ಚಟುವಟಿಕೆಗಳು ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಮುಂಜಾಗ್ರತಾ ಕ್ರಮವಾಗಿ 7 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೆ, ಕೆಲ ಪ್ರದೇಶಗಳಲ್ಲಿ ಪೊಲೀಸರು ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದರು.

ಇದಲ್ಲದೆ, ಕಾವೇರಿ ಹಿತರಕ್ಷಣಾ ಸಮಿತಿ ಮಂಡ್ಯ ಜಿಲ್ಲೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳ ಬಂದ್ ಗೆ ಕರೆ ನೀಡಿತ್ತು. ರೈತರು ಹಾಗೂ ಕನ್ನಡ ಪರ ಸಂಘಟನೆಗಳು ನಡೆಸಿದ್ದ ಈ ಪ್ರತಿಭಟನೆಗೆ ಮಂಡ್ಯ ಬಾರ್ ಅಸೋಸಿಯೇಷನ್ ಸದಸ್ಯರು ಕೂಡ ಕೈಜೋಡಿಸಿದ್ದರು. ಅಲ್ಲದೆ, ಪ್ರತಿಭಟನೆ ವೇಳೆ ಬಂಧಿತರಾಗಿರುವ ಜನರ ಪರವಾಗಿ ಯಾವುದೇ ದುಡ್ಡನ್ನು ತೆಗೆದುಕೊಳ್ಳದೆ ಉಚಿತವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವುದಾಗಿ ಘೋಷಣೆ ಮಾಡಿದರು.

SCROLL FOR NEXT