ರಾಜ್ಯ

ಮತ್ತೆ ಸಂಪುಟಕ್ಕೆ ಜಾರ್ಜ್ ಸೇರ್ಪಡೆ: ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷಗಳು

Manjula VN

ಬೆಂಗಳೂರು: ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಿಂದಾಗಿ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದ ಕೆ.ಜೆ ಜಾರ್ಜ್ ಅವರು ಮತ್ತೆ ಸಂಪುಟ ಸೇರಲಿದ್ದು, ಈ ಬಗ್ಗೆ ವಿರೋಧಪಕ್ಷಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿವೆ.

ಬಿ ರಿಪೋರ್ಟ್'ನ್ನೇ ಕ್ಲೀನ್ ಚಿಟ್ ಎಂದು ತಿಳಿಯುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ಜಾರ್ಜ್ ಅವರು ಈ ಹಿಂದೆ ಗೃಹ ಸಚಿವರಾಗಿದ್ದರು ಎಂಬುದನ್ನು ಮರೆಯುವಂತಿಲ್ಲ. ಇಬ್ಬರು ಪೊಲೀಸರ ಹೆಸರು ಕೂಡ ಪ್ರಕರಣದಲ್ಲಿ ಕೇಳಿಬಂದಿದೆ. ಇನ್ನು ಬಿ ರಿಪೋರ್ಟ್ ನ್ನು ನ್ಯಾಯಾಲಯ ಈ ವರೆಗೂ ಪರಿಗಣಿಸಿಲ್ಲ. ರಿಪೋರ್ಟ್ ಕುರಿತಂತೆ ಯಾರು ಬೇಕಾದರೂ ನ್ಯಾಯಾಲಯದಲ್ಲಿ ಸವಾಲೆಸೆಯಬಹುದು. ಜಾರ್ಜ್ ಅವರನ್ನು ಶೀಘ್ರಗತಿಯಲ್ಲಿ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತಿರುವುದು ಮೂರ್ಖತನವಾಗಿದೆ ಎಂದು ಬಿಜೆಪಿ ವಕ್ತಾರ ಜಿ. ಮಧುಸೂದನ್ ಅವರು ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಉನ್ನತಾಧಿಕಾರಿಗಳು, ಹಿರಿಯ ಅಧಿಕಾರಿಗಳ ವಿರುದ್ಧ ಕಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳು ಕಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದು ಸಹಜ. ಬಿ ರಿಪೋರ್ಟ್ ಆಶ್ಚರ್ಯವೇನು ತಂದಿಲ್ಲ ಎಂದು ಹೇಳಿದ್ದಾರೆ.

ಡಿವೈಎಸ್ಪಿ ಗಣಪತಿಯವರು ಜುಲೈ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವೊಂದನ್ನು ನೀಡಿದ್ದರು. ಸಂದರ್ಶನದಲ್ಲಿ ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ ಜಾರ್ಜ್ ಹಾಗೂ ಇಬ್ಬರು ಅಧಿಕಾರಿಗಳ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹೀಗಾಗಿ ಅನಿವಾರ್ಯವಾಗಿ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು.

ಈ ಮಧ್ಯೆಯೇ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ನ್ನು ಸಲ್ಲಿಕೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೆ ಜಾರ್ಜ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗಳು ಆರಂಭವಾಗಿದೆ.

SCROLL FOR NEXT