ಬೆಂಗಳೂರು: ಸೆಪ್ಟೆಂಬರ್ 12ರಂದು ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ತಮ್ಮ ಮಳಿಗೆಗಳ ಮೇಲೆ ನಡೆದ ದಾಳಿ ಮತ್ತು ಧ್ವಂಸವನ್ನು ಕಂಡ ತಮಿಳು ನಾಡಿನ ಸುಮಾರು 100 ಕಾರ್ಮಿಕರು ತಮ್ಮ ಗ್ರಾಮಗಳಿಗೆ ವಾಪಾಸ್ಸಾಗಿದ್ದಾರೆ.
ಬೆಂಗಳೂರಿನ ವಿವಿಧ ಕಡೆಗಳಲ್ಲಿ ಮಧುರೈ ಇಡ್ಲಿ ಮಳಿಗೆ ನಡೆಸುತ್ತಿದ್ದ 9 ಹೊಟೇಲ್ ಗಳ 400 ಸಿಬ್ಬಂದಿಗಳ ಪೈಕಿ 100ಕ್ಕೂ ಹೆಚ್ಚು ಸಿಬ್ಬಂದಿ ಬೆಂಗಳ ರಿನಿಂದ ತಮ್ಮ ಊರುಗಳಿಗೆ ಹೊರಟು ಹೋಗಿದ್ದಾರೆ. ಬೆಂಗಳೂರಿನಲ್ಲಿ ತನ್ನ ವ್ಯಾಪಾರ-ವಹಿವಾಟುಗಳನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಹೊಟೇಲ್ ನ ಮಾಲಿಕರಿಗೆ ಇದರಿಂದ ಭಾರೀ ಹಿನ್ನಡೆಯಾಗಿದೆ.
ಮಧುರೈ ಇಡ್ಲಿ ಶಾಪ್ ನ ವ್ಯವಸ್ಥಾಪಕ ನಿರ್ದೇಶಕ ಎನ್. ಜಯಕುಮಾರ್ ತಮ್ಮದೇ ಸ್ವಂತ ಐಟಿ ಕಂಪೆನಿ ಸ್ಥಾಪಿಸಲು ಬೆಂಗಳೂರಿಗೆ ವಲಸೆ ಬಂದಿದ್ದರು. ಆಕಸ್ಮಿಕವಾಗಿ ತಮ್ಮ ಪತ್ನಿ ಪ್ರೇಮಾ ಅವರಿಂದಾಗಿ ಮಧುರೈ ಇಡ್ಲಿ ಶಾಪ್ ನ್ನು ಆರಂಭಿಸಿದರು.
''ನಾವು ಮೊದಲ ಮಧುರೈ ಇಡ್ಲಿ ಶಾಪ್ ಮಳಿಗೆಯನ್ನು 2008ರಲ್ಲಿ ಇಂದಿರಾನಗರದಲ್ಲಿ ಸ್ಥಾಪಿಸಿದೆವು. ಅಲ್ಲಿ ಸಿಕ್ಕ ಯಶಸ್ಸು ಮಳಿಗೆಯನ್ನು ವಿಸ್ತರಿಸಲು ಪ್ರೇರೇಪಿಸಿತು. 9 ಮಳಿಗೆಯನ್ನು ಸ್ಥಾಪಿಸಿದ್ದು, ಇನ್ನೆರಡು ಮಳಿಗೆಗಳು ಸದ್ಯದಲ್ಲಿಯೇ ಆರಂಭವಾಗಲಿವೆ'' ಎಂದು ಹೇಳಿದರು.
ನಗರದಲ್ಲಿ ಇತ್ತೀಚಿನ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ಇಂದಿರಾನಗರ, ದೊಮ್ಮಲೂರು ಮತ್ತು ಮಹದೇವಪುರ ಮಳಿಗೆಯ ಮೂವರು ಮೇಲ್ವಿಚಾರಕರು, 10 ಸಿಬ್ಬಂದಿಗಳ ಮೇಲೆ ದಾಳಿ ಮಾಡಲಾಗಿತ್ತು. ಮಳಿಗೆಯ ಗ್ಲಾಸುಗಳನ್ನು ಒಡೆಯಲಾಗಿತ್ತು.
'' ಪ್ರತಿಭಟನೆ ಸಂದರ್ಭದಲ್ಲಿ ಸುಮಾರು 10 ಲಕ್ಷ ರೂಪಾಯಿ ನಷ್ಟವಾಗಿದೆ. ನಾವು ಮಧ್ಯಮ ವರ್ಗದ ವ್ಯಾಪಾರಿಗಳಾಗಿರುವುದರಿಂದ ಅಗ್ನಿ ಅವಘಡ ಮತ್ತು ಕಳ್ಳತನವಾದರೆ ಮಾತ್ರ ವಿಮಾ ಸೌಲಭ್ಯ ಸಿಗುತ್ತದೆ. 1992ರಲ್ಲಿ ನಡೆದ ತಮಿಳು ವಿರೋಧಿ ಕಾವೇರಿ ದಂಗೆಯ ಬಗ್ಗೆ ಅರಿವಿತ್ತು. ಆದರೆ ಕಳೆದ ಎರಡು ದಶಕಗಳಿಂದೀಚೆಗೆ ಬೆಂಗಳೂರು ನಗರ ಬಹು ಸಂಸ್ಕೃತಿ ಮತ್ತು ವೈವಿಧ್ಯತೆಯ ನಗರಿಯಾಗಿದ್ದು, ಐಟಿ ಉದ್ಯಮ ಕೇಂದ್ರವಾಗಿಯೂ ಮಾರ್ಪಾಡಾಗಿದೆ. ಅಂತಹ ಗಲಭೆ ಮತ್ತೆ ಮರುಕಳಿಸಬಹುದು ಎಂದು ನಾವು ಭಾವಿಸಲೇ ಇಲ್ಲ'' ಎನ್ನುತ್ತಾರೆ ಜಯಕುಮಾರ್.
ಇಂಗ್ಲೆಂಡಿನಲ್ಲಿ ಅಧ್ಯಯನ ಮುಗಿಸಿ ಬಂದಿರುವ ಅವರ ಪುತ್ರ ಗೌತಮ್ ಕುಮಾರ್ ಇತ್ತೀಚೆಗೆ ತಂದೆಯ ಜೊತೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವೇರಿ ಪ್ರತಿಭಟನೆ ವೇಳೆ ನಡೆದ ಗಲಾಟೆ ನಂತರ ಶೇಕಡಾ 50ರಷ್ಟು ನಮ್ಮ ವ್ಯಾಪಾರ ಕಡಿಮೆಯಾಗಿದೆ. ಹೊಟೇಲ್ ನಲ್ಲಿ ಜನರು ಕುಳಿತು ತಿಂಡಿ ತಿನ್ನುತ್ತಿರುವಾಗ ಏಕಾಏಕಿ ಬಂದು ದಾಳಿ ಮಾಡಲಾಯಿತು. ಇದೀಗ ಗ್ರಾಹಕರು ಈಗ ಹೊಟೇಲ್ ಗೆ ಬರಲು ಹೆದರುತ್ತಾರೆ. ಆದರೆ ನಮಗೆ ಏನು ಮಾಡಲು ಸಾಧ್ಯವಿಲ್ಲ, ಪರಿಸ್ಥಿತಿಗೆ ಹೊಂದಿಕೊಳ್ಳಲೇ ಬೇಕು. ಬಿಟ್ಟು ಹೋದ ಸಿಬ್ಬಂದಿ ಜಾಗಕ್ಕೆ ನೇಮಕಾತಿ ಮಾಡಿಕೊಳ್ಳುತ್ತೇವೆ'' ಎನ್ನುತ್ತಾರೆ ಗೌತಮ್.
ಇದೊಂದೇ ಅಲ್ಲದೆ ತಮಿಳು ನಾಡಿನ ಅನೇಕ ಐಟಿ ಕಂಪೆನಿಗಳು, ಅಂಗಡಿಗಳು, ತಮಿಳು ನಾಡಿನ ವಾಹನಗಳು ಇತ್ತೀಚಿನ ಪ್ರತಿಭಟನೆ ವೇಳೆ ಹಾನಿಗೊಂಡಿವೆ ಮತ್ತು ನಾಶವಾಗಿವೆ. ಇವೆಲ್ಲದರ ಮಾಲೀಕರು ಅನೇಕ ವರ್ಷಗಳ ಹಿಂದೆ ತಮಿಳು ನಾಡಿನಿಂದ ಬೆಂಗಳೂರಿಗೆ ಬಂದು ಜೀವನೋಪಾಯ ಕಂಡುಕೊಂಡವರು. ಹಾಗಾಗಿ ಬೇರೆ ದಾರಿಯಿಲ್ಲದೆ ಮತ್ತು ಜೀವನವನ್ನು ಕಟ್ಟುವ ಆಶಾವಾದದಲ್ಲಿ ಇವರಿದ್ದಾರೆ.