ಬೆಂಗಳೂರು: ವಿಶೇಷ ಘಟನೆಯೊಂದರಲ್ಲಿ ಬೆಂಗಳೂರಿನ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮೊನ್ನೆ ನಡೆದ ಮೊದಲ ಭಾಷೆ ಕನ್ನಡ ಪರೀಕ್ಷೆಯಂದು ಕನ್ನಡ ಬರೆಯುವ ಬದಲು ಇಂಗ್ಲಿಷ್ ಬರೆದ ಘಟನೆ ನಡೆದಿದೆ.
ಹೆಬ್ಬಾಳದ ಪ್ರಿಯದರ್ಶಿನಿ ಹೈಸ್ಕೂಲ್ ನ ವಿದ್ಯಾರ್ಥಿಯ ಮೊದಲ ಭಾಷಾ ಅಧ್ಯಯನ ಕನ್ನಡವಾಗಿದೆ. ಆದರೆ ಪರೀಕ್ಷೆ ದಿನ ಕನ್ನಡ ಬರೆಯುವ ಬದಲು ಇಂಗ್ಲಿಷ್ ನಲ್ಲಿ ಬರೆದಿದ್ದಾನೆ. ಕನ್ನಡ ಭಾಷಾ ಪರೀಕ್ಷೆ ಹೇಗೆ ಮಾಡಿದೆ ಎಂದು ಮನೆಗೆ ಬಂದಾಗ ಪೋಷಕರು ಕೇಳಿದಾಗಲೇ ತಾನು ಮಾಡಿರುವ ತಪ್ಪು ಆತನಿಗೆ ಅರಿವಾಗಿದ್ದು.
ತಮ್ಮ ಪುತ್ರ ಕನ್ನಡಕ್ಕೆ ಬದಲಾಗಿ ಇಂಗ್ಲಿಷ್ ಬರೆದಿದ್ದಾನೆ ಎಂದು ಗೊತ್ತಾದಾಗ ಪೋಷಕರು ಶಾಲೆಯ ಮುಖ್ಯಸ್ಥರಿಗೆ ಹೋಗಿ ಕೇಳಿದರು. ಕೂಡಲೇ ಕರ್ನಾಟಕ ಪ್ರೌಢಶಿಕ್ಷಣ ಮತ್ತು ಪರೀಕ್ಷಾ ಮಂಡಳಿಗೆ ಶಾಲೆಯ ಮುಖ್ಯಸ್ಥರು ಪತ್ರ ಬರೆದು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಮನವಿ ಮಾಡಿದರು.
ಶಾಲೆಯ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿ, ವಿದ್ಯಾರ್ಥಿ ಮತ್ತು ಸಂವೀಕ್ಷಕರನ್ನು ಆರೋಪಿಸಬೇಕು. ಯಾವ ವಿಷಯ ಎಂದು ವಿದ್ಯಾರ್ಥಿಗೆ ಗೊತ್ತಿರಬೇಕಿತ್ತು ಎಂದಿದ್ದಾರೆ.
ವಿದ್ಯಾರ್ಥಿಯ ಮೊದಲ ಭಾಷೆ ಯಾವುದು ಎಂದು ಕೊಠಡಿಯ ಸಂವೀಕ್ಷಕರು ಪ್ರಶ್ನೆ ಪತ್ರಿಕೆ ನೀಡುವ ಮುನ್ನ ಹಾಲ್ ಟಿಕೆಟ್ ನಲ್ಲಿ ನೋಡಬೇಕಿತ್ತು ಎನ್ನುತ್ತಾರೆ.
ಆದರೆ ವಿದ್ಯಾರ್ಥಿಗೆ ಉಳಿದಿರುವುದು ಇನ್ನೊಂದೇ ಮಾರ್ಗ ಅದು ಜೂನ್ ನಲ್ಲಿ ನಡೆಯುವ ಪೂರಕ ಪರೀಕ್ಷೆ ಬರೆಯುವುದು ಎಂದು ಎಸ್ಎಸ್ಎಲ್ ಸಿ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.