ಧಾರವಾಡ: ಧಾರ್ಮಿಕ ವಿಷಯ ಸಂಬಂಧ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಕಲಘಟಕಿಯ ಸಂಗಮೇಶ್ವರದಲ್ಲಿ ನಡೆದಿದೆ.
ಗ್ರಾಮದೇವತೆ ಮಾರಮ್ಮ ದೇವಿಗೆ ಪೂಜೆ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿದೆ, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಗಮೇಶ್ವರ ಗ್ರಾಮದಲ್ಲಿ 26 ವರ್ಷಗಳ ನಂತರ ಮಾರಮ್ಮ ದೇವಿ ಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ದೇವಿಗೆ ಪಲ್ಲಕ್ಕಿ ಉತ್ಸವ ಮಾಡಲಾಗುತ್ತಿತ್ತು. ಗ್ರಾಮದ ಎಲ್ಲಾ ಬೀದಿಗಳಲ್ಲೂ ಪಲ್ಲಕ್ಕಿ ಮೆರವಣಿಗೆ ನಂತರ ವಿಷ್ಣು ಮಾದಾರ್ ಮನೆ ಮುಂದೆ ಉತ್ಸವ ಬಂತು. ಈ ವೇಳೆ ದೇವತಗೆ ಪೂಜೆ ಮಾಡುವಂತೆ ಗ್ರಾಮಸ್ಥರು ಹೇಳಿದ್ದಾರೆ, ಆದರೆ ವಿಷ್ಣು ಮಾದಾರ್ ಇದಕ್ಕೆ ನಿರಾಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಗುಂಪೊಂದು ಆತನನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದೆ. ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ.
ಈ ವೇಳೆ ವಿಷ್ಣು ಮಾದರ್ ಮತ್ತು ಆತನ ಕಡೆಯವರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಮಂಜುನಾಥ್ ಮಾದಾರ್ ತೀವ್ರವಾಗಿ ಗಾಯಗೊಂಡಿದ್ದು ಆತನವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ಮಾದಾರ್ ತಂದೆ ಗ್ರಾಮದೇವತೆಗೆ ಪೂಜೆ ಮಾಡುತ್ತಿದ್ದರು. ಆದರೆ ದೇವಾಲಯದಲ್ಲಿ ಸರಿಯಾದ ವರಮಾನ ಬರುತ್ತಿಲ್ಲವಾದ್ದರಿಂದ 2004 ರಲ್ಲಿ ಗ್ರಾಮ ದೇವತೆಗೆ ಪೂಜೆ ಮಾಡುವುದನ್ನು ನಿಲ್ಲಿಸಿ, ಗ್ರಾಮ ತೊರೆದಿದ್ದರು. ಆದರೆ ಅವರನ್ನು ವಾಪಸ್ ಕರೆತಂದ ಗ್ರಾಮಸ್ಥರು ಪೂಜೆ ಮಾಡುವಂತೆ ಒತ್ತಾಯಮಾಡುವುದಿಲ್ಲ ಎಂಬ ಭರವಸೆ ನೀಡಿದ್ದರು.
ನಾವು ವಾಪಸ್ ಊರಿಗೆ ಬಂದ ಮೇಲೆ ಧಾರ್ಮಿಕ ಕಾರ್ಯಕ್ರಮಗಳಿಂದ ದೂರವಿದ್ದೆವು. ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಕೆಲ ಯುವಕರು ಹಬ್ಬದ ವೇಳೆ ನಮ್ಮ ಮೇಲೆ ಹಲ್ಲೆ ಮಾಡಿ,ಕೆಳವರ್ಗದವರಿಗೆ ಸೇರಿದ ಹಲವು ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ವಿಷ್ಣು ಮಾದರ್ ಆರೋಪಿಸಿದ್ದಾರೆ. ಕಲಘಟಕಿ ಪೋಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.