ಪಿಂಕ್ ಹೊಯ್ಸಳಕ್ಕೆ ಇಂದು ವಿಧಾನ ಸೌಧದ ಮುಂದೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಬೆಂಗಳೂರು ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಹೊಸ ಗಸ್ತು ವಾಹನಾ ವ್ಯವಸ್ಥೆ ಪಿಂಕ್ ಹೊಯ್ಸಳ ಇಂದು ಉದ್ಘಾಟನೆಗೊಂಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ವಿಧಾನ ಸೌಧದ ಮುಂಭಾಗ ಪಿಂಕ್ ಹೊಯ್ಸಳ ವಾಹನಕ್ಕೆ ಹಸಿರು ನಿಶಾನೆ ತೋರಿದರು.
ಇದು ಮಹಿಳೆಯರಿಗಾಗಿಯೇ ಇರುವ ವಾಹನವಾಗಿದ್ದು ಅವರ ದೂರು, ದುಮ್ಮಾನಗಳನ್ನು ಸ್ವೀಕರಿಸಿ ಬಗೆಹರಿಸಲಿದೆ. ಒಟ್ಟು 51 ಪಿಂಕ್ ಹೊಯ್ಸಳ ವಿಮಾನಗಳು ನಗರದಾದ್ಯಂತ ಗಸ್ತು ತಿರುಗಲಿವೆ.
ಪಿಂಕ್ ಹೊಯ್ಸಳದ ಪ್ರತಿ ಕಾರಿನಲ್ಲಿ ಮೂವರು ಮಹಿಳಾ ಪೊಲೀಸರಿರುತ್ತಾರೆ. ಶಾಲೆಗಳು, ಮಹಿಳಾ ಕಾಲೇಜುಗಳು, ಕಚೇರಿ, ದೇವಸ್ಥಾನಗಳು, ಶಾಪಿಂಗ್ ಮಾಲ್, ಥಿಯೇಟರ್ ಇತ್ಯಾದಿಗಳ ಸಮೀಪ ಇವು ನಿಂತಿರುತ್ತವೆ. ಸುರಕ್ಷಾ ಎಂಬ ಮೊಬೈಲ್ ಆಪ್ ಹಾಗೂ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 100 ಮೂಲಕ ಮಹಿಳೆಯರು ನೀಡಿದ ದೂರಿನ ಆಧಾರದ ಮೇಲೆ ವಿಶೇಷ ತರಬೇತಿ ಪಡೆದ ಮಹಿಳಾ ಪೊಲೀಸರು ರಕ್ಷಣೆಗೆ ತೆರಳುತ್ತಾರೆ.
ಜಿಪಿಎಸ್ ಘಟಕ ಮತ್ತು ಕ್ಯಾಮರಾಗಳು ಪಿಂಕ್ ಹೊಯ್ಸಳದಲ್ಲಿರುತ್ತವೆ. ಪೊಲೀಸ್ ನಿಯಂತ್ರಣ ಕೋಣೆಯಲ್ಲಿರುವ ಸಿಬ್ಬಂದಿ ಕ್ಯಾಮರಾದಲ್ಲಿ ದಾಖಲಾದವುಗಳನ್ನು ಗಮನಿಸುತ್ತಿರುತ್ತಾರೆ. ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಈ ಮುನ್ನ ನಗರದಲ್ಲಿ ಏಳು ಅಭಯ ವಾಹನಗಳನ್ನು ಜಾರಿಗೆ ತರಲಾಗಿತ್ತು. ಪಿಂಕ್ ಹೊಯ್ಸಳ ಅದರ ಬದಲಿಗೆ ಇರುತ್ತದೆ.
ಬೆಂಗಳೂರು ನಗರ ಪೊಲೀಸ್ ಇಲಾಖೆ 221 ಹೊಯ್ಸಳ ಗಸ್ತು ವಾಹನಗಳನ್ನು ಹೊಂದಿದೆ.