ಮಡಿಕೇರಿ: ದಿಡ್ಡಳ್ಳಿಯ ಗುಡಿಸಲಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಫಿ ತೋಟದ ಮಾಲೀಕನೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತನನ್ನು ಸೋಮವಾರಪೇಟೆ ತಾಲೂಕಿನ ಚೆನ್ನಂಗಿ ಸಮೀಪದ ಗುಡ್ಲೂರು ಕಾಫಿ ತೋಟದ ಮಾಲೀಕ ಅಮ್ಮತಾಂಡ ಪೂಣಚ್ಚ (50) ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ನಡೆದಿರುವುದು ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದೇ ಹೊರತು ಇದರ ಹಿಂದೆ ಯಾವುದೇ ನಕ್ಸಲರ ಕೈವಾಡವಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಗುಡಿಸಿನಲ್ಲಿದ್ದ ಆದಿವಾಸಿಗಳು ಕೂಲಿಗೆ ಬರುವುದಾಗಿ ಮುಂಗಡ ಹಣವನ್ನು ಪಡೆದುಕೊಂಡು ಕೆಲಸಕ್ಕೆ ಬಾರದ ಕಾರಣ ಕೋಪಗೊಂಡಿದ್ದ ಪೂಣಚ್ಚ ಅವರು ಗುಂಡು ಹಾರಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಪೂಣಚ್ಚ ಅವರು ಆದಿವಾಸಿಗಳಾದ ಮಣಿ, ಚಿಪ್ಪ ಮತ್ತು ಅಣ್ಣಪ್ಪ ಎಂಬುವವರಿಗೆ ಕೂಲಿಗೆ ಬರುವಂದೆ ರೂ.1000, 200 ಮತ್ತು 800 ಹಣವನ್ನು ಮುಂಗಡವಾಗಿ ನೀಡಿದ್ದಾರೆ. ಹಣವನ್ನು ಪಡೆದುಕೊಂಡ ಬಳಿಕ ಆದಿವಾಸಿಗಳು ಕೆಲಕ್ಕೆ ಹೋಗಿಲ್ಲ. ಈ ವೇಳೆ ಮತ್ತೆ ಸ್ಥಳಕ್ಕೆ ಬಂದಿರುವ ಪೂಣಚ್ಚ ಅವರು ಜಗಳ ಆಡಿ ಹಣವನ್ನು ಹಿಂದಕ್ಕೆ ನೀಡುವಂತೆ ತಿಳಿಸಿದ್ದಾರೆ. ಈ ವೇಳೆ ಕಾರ್ಮಿಕರು ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಕೈಯಲ್ಲಿದ್ದ ಬಂದೂಕಿನಿಂದ ಏಕಾಏಕಿ ಗುಂಡುಗಳನ್ನು ಹಾರಿಸಿದ್ದಾರೆ.
ಆದಿವಾಸಿಗಳು ನೀಡಿದ ಮಾಹಿತಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಗುಂಡು ಹಾರಿಸಿದ ಬಂದೂಕು, 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪೂಣಚ್ಚ ಮಾನಸಿಕ ಅಸ್ವಸ್ಥನಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.