ರಾಜ್ಯ

ನಕಲಿ ಅಂಕಪಟ್ಟಿ ದಂಧೆ: ಬಿಹಾರ ಮೂಲದ ವ್ಯಕ್ತಿ ಬಂಧನ

Manjula VN
ಬೆಂಗಳೂರು: ನಕಲಿ ಅಂಕಪಟ್ಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡಿಸುತ್ತಿದ್ದ ಬಿಹಾರ ಮೂಲದ ಆರೋಪಿಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಬಿಹಾರ ಮೂಲದ ಕುನಾಲ್ ಕುಮಾರ್ ಮಂಡಲ್ (28) ಬಂಧಿತ ಆರೋಪಿಯಾಗಿದ್ದಾನೆ. 2011ರಲ್ಲಿ ನಗರಕ್ಕೆ ಬಂದಿದ್ದ ಆರೋಪಿ ಮಾನ್ಯತಾ ಟೆಕ್ ಪಾರ್ಕ್ ಬಳಿ ನೆಲೆಯೂರಿದ್ದ. 
ಮಂಡಲ್ ಸ್ನಾತಕೋತ್ತರ ಪದವಿಯನ್ನು ಮಾಡಿದ್ದು,  ಖಾಸಗಿ ಕಾಲೇಜೊಂದರಲ್ಲಿ 2011ರಿಂದ ಕೆಲಸ ಮಾಡುತ್ತಿದ್ದ. ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲಸ ನೋಡಿಕೊಳ್ಳುತ್ತಿದ್ದ. ನಗರದ ಡೆಕೆನ್ ಸನ್ ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್ ಕಟ್ಟದಲ್ಲಿ 'ಜಾಯಿನ್ ಅಸ್'ಎಂಬ ಹೆಸರಿನಲ್ಲಿ 2013ರಿಂದ ಕಚೇರಿಯನ್ನು ಹೊಂದಿದ್ದ ಆರೋಪಿ, ಪ್ರತಿಷ್ಠಿತ ಕಾಲೇಜುಗಳ ನಕಲಿ ಇ-ಮೇಲ್ ವಿಳಾಸ ಸೃಷ್ಟಿಸುತ್ತಿದ್ದ. 
ಕಾಲೇಜು ಪ್ರವೇಶದ ವೇಳೆ ಕುನಾಲ್ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ. ತನನ್ನು ಸಂಪರ್ಕಿಸುತ್ತಿದ್ದ ವಿದ್ಯಾರ್ಥಿ ಹಾಗೂ ಪೋಷಕರಿಗೆ ತಾವು ಕಡಿಮೆ ಅಂಕ ಪಡೆದಿದ್ದು, ಸೀಟು ಸಿಗುವುದು ಕಷ್ಟ. ಆದರೆ, ಸೀಟು ಕೊಡಿಸಲು ಬೇಕಾದ ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಕೊಡಿಸುತ್ತೇನೆಂದು ಹೇಳುತ್ತಿದ್ದ ಆರೋಪಿ, ತಲಾ ವಿದ್ಯಾರ್ಥಿಗೆ ಸೀಟು ಕೊಡಿಸಲು ರೂ.2 ಲಕ್ಷ ನಿಗದಿಪಡಿಸಿದ್ದ. ಅದರಂತೆ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದ. 
ಬಳಿಕ ವಿದ್ಯಾರ್ಥಿಗಳಿಗೆ ನಕಲಿ ಕಾಲೇಜು ಇ-ಮೇಲ್ ವಿಳಾಸದಿಂದಲೇ ತಾವು ಸೀಟು ಪಡೆಯಲು ಅರ್ಹವಿರುವುದಾಗಿ ಸಂದೇಶ ಕಳುಹಿಸಿ ಹಣ ಪಡೆಯುತ್ತಿದ್ದ. ಕಾಲೇಜು ಪ್ರವೇಶಾತಿ ಪ್ರಕ್ರಿಯೆ ವೇಳೆ ಕುನಾಲ್ ಕುಮಾರ್ ಕಾಲೇಜುಗಳ ಮಾಹಿತಿ ಮುದ್ರಿಸಿ ಕರಪತ್ರ ಹಂಚಿಸುತ್ತಿದ್ದ. ಇದರಲ್ಲಿ ಕುನಾಲ್ ಕುಮಾರ್ ಮೊಬೈಲ್ ಸಂಖ್ಯೆ ಕೂಡ ಇರುತ್ತಿತ್ತು. ಇದನ್ನು ನೋಡಿದ ವಿದ್ಯಾರ್ಥಿ ಹಾಗೂ ಪೋಷಕರು ಆರೋಪಿಯನ್ನು ಸಂಪರ್ಕಿಸುತ್ತಿದ್ದರು. 
ಮೋಸ ಹೋಗುತ್ತಿದ್ದರು ಸಹ ವಿದ್ಯಾರ್ಥಿಗಳ್ಯಾರು ಪೊಲೀಸರಿಗೆ ದೂರು ನೀಡಿರಲಿಲ್ಲ. ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಆಧಾರದ ಮೇರೆಗೆ ಕಚೇರಿಯಲ್ಲಿಯೇ ಆರೋಪಿ ಕುನಾಲ್ ನನ್ನು ಬಂಧನಕ್ಕೊಳಪಡಿಸಲಾಯಿತು. ಆರೋಪಿ ತಯಾರಿಸಿಕೊಟ್ಟ ನಕಲಿ ಅಂಕಪಟ್ಟಿ ಪಡೆದು ಕೆಲ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸೀಟು ಪಡೆದಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
SCROLL FOR NEXT