ರಾಜ್ಯ

ಬೆಂಗಳೂರು: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Sumana Upadhyaya
ಬೆಂಗಳೂರು: 14 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾಲಹಳ್ಳಿ ಸಮೀಪ ಬಿಇಎಲ್ ಕಾಲೊನಿಯಲ್ಲಿ ನಿನ್ನೆ ನಡೆದಿದೆ. 
ಬಿಇಎಲ್ ನಲ್ಲಿ ಉದ್ಯೋಗಿಯಾಗಿರುವ ರಾಜಕುಲಶೇಖರ ಅವರ ಮಗಳು ಜಾಲಹಳ್ಳಿ ಸಮೀಪ ಖಾಸಗಿ ಶಾಲೆಯಲ್ಲಿ ಓದುತ್ತಿರುವ 9ನೇ ತರಗತಿಯ ವೈಷ್ಣವಿ ಕೆ.ಆರ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಈ ದುರ್ಘಟನೆ ಏಪ್ರಿಲ್ 5ರಂದು ನಡೆದಿದ್ದು ಈ ಸಂದರ್ಭದಲ್ಲಿ ವೈಷ್ಣವಿಯೊಬ್ಬಳೇ ಮನೆಯಲ್ಲಿದ್ದಳು. ಅವಳ ಪೋಷಕರು ಹೊರ ಹೋಗಿದ್ದರು ಮತ್ತು ಹಿರಿಯ ಸೋದರಿ ಕಾಲೇಜಿಗೆ ಹೋಗಿದ್ದಳು. ಪೋಷಕರು ಮನೆಗೆ ಮರಳಿ ಬಂದು ಎಷ್ಟು ಸಾರಿ ಬಾಗಿಲು ಬಡಿದರೂ ವೈಷ್ಣವಿ ಬಾಗಿಲು ತೆರೆಯದಿದ್ದಾಗ ಸಂಶಯ ಬಂತು. ಕಿಟಕಿ ಮೂಲಕ ಇಣುಕಿ ನೋಡಿದಾಗ ಡ್ರಾಯಿಂಗ್ ರೂಂನ ಫ್ಯಾನಿಗೆ ನೇಣು ಬಿಗಿದು ನೇತಾಡುವ ಸ್ಥಿತಿಯಲ್ಲಿದ್ದಳು. ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ ಪೋಷಕರು ನಂತರ ಜಾಲಹಳ್ಳಿ ಠಾಣೆ ಪೊಲೀಸರಿಗೂ ಮಾಹಿತಿ ತಲುಪಿಸಿದರು.
ತನ್ನನ್ನು ಪೋಷಕರು ನಿರ್ಲಕ್ಷ್ಯ ಮಾಡುತ್ತಿದ್ದು ಅಕ್ಕನನ್ನು ಮಾತ್ರ ಪ್ರೀತಿ ಮಾಡುತ್ತಾರೆ ಎಂದು ವೈಷ್ಣವಿ ಭಾವಿಸುತ್ತಿದ್ದಳು. ಆಕೆ ಓದಿನಲ್ಲಿಯೂ ಅಷ್ಟು ಮುಂದಿಲ್ಲದಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ಹೇಳುತ್ತಾರೆ. 
ಮೂಲಗಳ ಪ್ರಕಾರ, ಕೆಲ ದಿನಗಳ ಹಿಂದೆ ವೈಷ್ಣವಿ ಶಾಲೆಯಲ್ಲಿ ವಿಶೇಷ ತರಗತಿಗೆ 30 ನಿಮಿಷ ತಡವಾಗಿ ಹೋಗಿದ್ದರಿಂದ ಶಾಲೆಯ ಗೇಟ್ ಬಳಿ ನಿಲ್ಲಬೇಕಾಯಿತು. ಇದು ಕೂಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಕೆಲವರು ಹೇಳುತ್ತಾರೆ.
ಜಾಲಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಷ್ಣವಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.
SCROLL FOR NEXT