ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಕ್ಕಳಿಗೆ ಕಥೆ ಹೇಳುತ್ತಿರುವ ಸ್ಮೃತಿ
ಬೆಂಗಳೂರು: ಬಾಲ್ಯ ಜೀವನದ ನೆನಪು ಪ್ರತಿಯೊಬ್ಬರಿಗೂ ಬರುತ್ತದೆ. ನಮ್ಮ ಜೀವನದ ಅತ್ಯಂತ ಮಧುರ ಕ್ಷಣಗಳಲ್ಲಿ ಬಾಲ್ಯ ಜೀವನದ ನೆನಪುಗಳು ಬಹಳ ಮುಖ್ಯವಾಗಿರುತ್ತವೆ. ಬಾಲ್ಯದಲ್ಲಿ ಆಡಿದ ಆಟಗಳು, ಕೇಳಿದ ಕಥೆಗಳು...ಇತ್ಯಾದಿ.
ಆದರೆ ಇಂದಿನ ಮಕ್ಕಳು ಬಾಲ್ಯದ ಇಂತಹ ಅದ್ಭುತ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಜ್ಜಿ, ಅಜ್ಜಂದಿರ ಹತ್ತಿರ ಕಥೆ ಕೇಳುವ ಸೌಭಾಗ್ಯವಂತೂ ಇಂದಿನ ಮಕ್ಕಳಿಗೆ ಸಿಗುವುದು ಭಾರೀ ಕಡಿಮೆ.ನಗರದ ಮಕ್ಕಳಿಗೆ ಅಜ್ಜಿ ಕಥೆ ಕೇಳುವ ಸೌಭಾಗ್ಯ ಸಿಗಲು ಸ್ಮೃತಿ ಹರಿಟ್ಸ್ ಎಂಬ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕಾಗಕ್ಕ ಗುಬ್ಬಕ್ಕ ಎಂಬ ವೇದಿಕೆಯನ್ನು ನಿರ್ಮಿಸಿ ಮಕ್ಕಳಿಗೆ ಕಥೆ ಹೇಳುವ, ಸಾಂಪ್ರದಾಯಿಕ ಆಟ ಆಡಿಸುವ ಕಾರ್ಯ ಮಾಡುತ್ತಿದ್ದಾರೆ.
ಮಕ್ಕಳಿಗೆ ನೀತಿ ಕಥೆ ಹೇಳಿಕೊಡುವುದು, ಜೀವನ ಕೌಶಲ್ಯ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವುದು, ಬೇರೆ ಮಕ್ಕಳೊಂದಿಗೆ ಬೆರೆಯುವ ಗುಣಗಳನ್ನು ಹೇಳಿಕೊಡಲಾಗುತ್ತದೆ.
ಕಾಗಕ್ಕ ಗುಬ್ಬಕ್ಕ ಕಾರ್ಯಕ್ರಮವನ್ನು ಕೆಲ ತಿಂಗಳ ಹಿಂದಷ್ಟೇ ಆರಂಭಿಸಲಾಗಿದೆ. ನಾನು ಬೆಂಗಳೂರಿನ ಮಲ್ಲೇಶ್ವರದವಳಾಗಿದ್ದೇನೆ. ಇಂದು ಅನೇಕ ಮಂದಿ ನಿವೃತ್ತರ ಮಕ್ಕಳು ವಿದೇಶಗಳಿಗೆ ಹೋಗಿ ನೆಲೆಸಿದ್ದಾರೆ. ಮಕ್ಕಳು ಹೆಚ್ಚಾಗಿ ವಿಭಜಿತ ಕುಟುಂಬದಲ್ಲಿ ನೆಲೆಸುತ್ತಾರೆ. ಅಂತಹ ಮಕ್ಕಳು ಮನೆಯಿಂದ ಹೊರಬರುವುದು, ಜನರ ಜೊತೆ ಬೆರೆಯುವುದು ಕಡಿಮೆಯೇ. ಇಂತಹ ಮಕ್ಕಳಿಗೆ ಒಂದು ಸೂಕ್ತ ವೇದಿಕೆ ಒದಗಿಸಲು ತಲೆ ತಲಾಂತರಗಳಿಂದ ಬಂದ ಕಥೆ ಹೇಳುವ ಕಾರ್ಯಕ್ರಮವನ್ನು ನಡೆಸುತ್ತಿದ್ದೇನೆ. ಕಾಗಕ್ಕ ಗುಬ್ಬಕ್ಕ ಕಥೆ ಹೇಳುವ ಕಾರ್ಯಕ್ರಮ ಕಳೆದ ವರ್ಷ ಜುಲೈಯಲ್ಲಿ ಆರಂಭಗೊಂಡಿತು ಎನ್ನುತ್ತಾರೆ ಸ್ಮೃತಿ.
ಮಕ್ಕಳು ಕಂಪ್ಯೂಟರ್, ಗೇಮ್ಸ್, ಮೊಬೈಲ್ ಹೊರತುಪಡಿಸಿ ಅದರಿಂದಾಚೆಗೆ ಸುಂದರ ಪ್ರಪಂಚವಿದೆ ಎನ್ನುತ್ತಾರೆ ಈ ಕಾರ್ಯಕ್ರಮದ ಮತ್ತೊಬ್ಬ ರೂವಾರಿ ಸುಧಾ ಅಭಿರಾಮ್.
ಈ ಕಾರ್ಯಕ್ರಮ ಹೆಚ್ಚಾಗಿ ವಾರಾಂತ್ಯಗಳಲ್ಲಿದ್ದು ನಗರದ ಮಕ್ಕಳು ಯಾರು ಬೇಕಾದರೂ ಹೋಗಬಹುದು. ಯಾವುದೇ ಶುಲ್ಕವಿರುವುದಿಲ್ಲ. ಮಕ್ಕಳಿಗೆ ಕಥೆ ಹೇಳುವುದರ ಜೊತೆಗೆ ಇತರ ಚಟುವಟಿಕೆಗಳನ್ನು ಕೂಡ ಮಾಡಿಸಲಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos