ಬಾವಿಯಿಂದ ನೀರು ಸಂಗ್ರಹಿಸುತ್ತಿರುವ ಗ್ರಾಮಸ್ಥರು
ಬೆಳಗಾವಿ: ಬೆಳಗಾವಿಯ ಹಲವು ಜಿಲ್ಲೆಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಗ್ರಾಮದಲ್ಲಿರುವ ಬಾವಿಯಿಂದ ಎರಡು ದಿನಗಳಿಗೊಮ್ಮೆ 2 ಬಿಂದಿಗೆ ಮಾತ್ರ ನೀರು ನೀಡಲಾಗುತ್ತಿದೆ.
ಬೆಳಗಾವಿಯ ಖಾನಾಪುರದ ಗ್ರಾಮವೊಂದರಲ್ಲಿ ಒಂದು ರೇಷನ್ ಕಾರ್ಡ್ ಗೆ ಕೇವಲ ಎರಡು ಬಿಂದಿಗೆ ಮಾತ್ರ ಕುಡಿಯುವ ನೀರು ನೀಡಲಾಗುತ್ತಿದೆ. ಹೆಚ್ಚು ನೀರು ಬಳಸಿದರೆ ಕುಡಿಯುವ ನೀರು ಪೂರೈಸುವ ಬಾವಿ ಬತ್ತಿ ಹೋಗುತ್ತದೆ ಎಂಬ ಕಾರಣಕ್ಕೆ ಸುಮಾರು 800 ಮಂದಿಯಿರುವ ಮಾನ್ ಎಂಬ ಹಳ್ಳಿಯಲ್ಲಿ ಬಲವಂತವಾಗಿ ಈ ನಿಯಮ ಅನುಸರಿಸಲಾಗುತ್ತಿದೆ.
ಬೆಳಗಾವಿಯಿಂದ 50 ಕಿಮೀ ದೂರದಲ್ಲಿರುವ ಮಾನ್ ಗ್ರಮ ಕಳೆದ ಕೆಲವು ತಿಂಗಳಿಂದ ನೀರಿಗಾಗಿ ತತ್ವಾರ ಪಡುತ್ತಿದೆ. ನೀರಿಗಾಗಿ ಜನ ಪರದಾಡುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಟ್ಯಾಂಕರ್ ಗಳಲ್ಲಿ ನೀರು ಪೂರೈಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇಡೀ ಗ್ರಾಮಕ್ಕೆ ಇದೊಂದೇ ಬಾವಿಯಲ್ಲಿ ಮಾತ್ರ ಕುಡಿಯುವ ನೀರು ಇರುವುದು. ಇದರಿಂದ ಪೂರ್ತಿ ಹಳ್ಳಿಗೆ ನೀರು ಪೂರೈಕೆ ಸಾಧ್ಯವಿಲ್ಲ, ಒಮ್ಮೆನೀರು ತೆಗೆದು ಕೊಂಡರೇ ಮತ್ತೆ ತುಂಬಲು ಒಂದು ದಿನ ಸಮಯ ಬೇಕಾಗುತ್ತದೆ.
ಇತ್ತೀಚೆಗೆ ಊರಿನ ಹಿರಿಯರೆಲ್ಲಾ ಸಭೆ ನಡೆಸಿ, ಒಂದು ರೇಷನ್ ಕಾರ್ಡ್ ಗೆ ಎರಡು ಬಿಂದಿಗೆಯಂತೆ ನೀರು ಪಡೆಯುವ ನಿಯಮ ರೂಪಿಸಿದ್ದಾರೆ. ಮಾನ್ ಗ್ರಾಮದಲ್ಲಿರುವ ಶೇ.95 ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಕುಡಿಯುವ ನೀರನ್ನು ಪಡೆಯಲು ಗ್ರಾಮಸ್ಥರು ಊರಿನಿಂದ ಸುಮಾರು 4 ಕಿಮೀ ನಡೆದುಕೊಂಡು ಬರಬೇಕಿದೆ.