ಬೆಂಗಳೂರು: ನಗರದ ಬಿಟಿಎಂ ಲೇಔಟ್'ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಮಧ್ಯವರ್ತಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಉಸ್ಮಾನ್, ನರೇಶ್ ಸಿಂಗ್, ಪರ್ವೇಜ್ ಖಾನ್ ಮತ್ತು ಶರವಣ ಎಂದು ಗುರ್ತಿಸಲಾಗಿದೆ. ತಮ್ಮ ದಂಧೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಸಹಾಯ ಮಾಡುತ್ತಿದ್ದರು ಎಂದು ವಿಚಾರಣೆ ಆರೋಪಿಗಳು ಹೇಳಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆರೋಪಿಗಳು ಗ್ರಾಹಕರಿಂದ ರೂ.25,000 ರಿಂದ 30,000 ಹಣವನ್ನು ಪಡೆಯುತ್ತಿದ್ದರು. ಆನ್ ಲೈನ್ ಮುಖಾಂತರ ಗ್ರಾಹಕರಿಂದ ರೂ.67,000 ಹಣವನ್ನು ಸಂಗ್ರಹಿಸಿದ್ದಾರೆ. ಇದಲ್ಲದೆ, ಸ್ವೈಪಿಂಗ್ ಯಂತ್ರಗಳನ್ನು ಹೊಂದಿದ್ದ ಆರೋಪಿಗಳು ಗ್ರಾಹಕರಿಂದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೂಲಕವೂ ಹಣವನ್ನು ಪಡೆಯುತ್ತಿದ್ದರು. ದಾಳಿ ವೇಳೆ ನಾಲ್ಕು ಸ್ವೈಪಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಉಸ್ಮಾನ್ ಪ್ರಮುಖ ಆರೋಪಿಯಾಗಿದ್ದು, ಈತನೇ ವೆಬ್ ಸೈಟ್ ವೊಂದನ್ನು ತೆರೆದು, ಈ ಮೂಲಕ ಶ್ರೀಮತರು, ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಟೆಕ್ಕಿಗಳನ್ನು ಸಂಪರ್ಕಿಸುತ್ತಿದ್ದ. ಸಿಇಒಗಳು, ಕಂಪನಿಯ ಅತಿಥಿಗಳು ಮಾತ್ರ ಮನೆಗೆ ಬರುತ್ತಾರೆಂದು ಹೇಳಿದ್ದ ಆರೋಪಿ ಉದ್ಯಮಿಯೊಬ್ಬರಿಂದ ಬಂಗಲೆಯನ್ನು ಬೋಗ್ಯಕ್ಕೆ ಪಡೆದುಕೊಂಡಿದ್ದ. ಬಂಗಲೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಾರ ಮನೆಯ ಮಾಲೀಕನಿಗೆ ತಿಳಿದಿಲ್ಲ.
ವಾರಾಂತ್ಯಗಳಲ್ಲಿ ಉಸ್ಮಾನ್ ಮುಂಬೈನಿಂದ ಮಹಿಳೆಯರನ್ನು ಕರೆತರುತ್ತಿದ್ದ. ವಿಮಾನದ ಟಿಕೆಟ್ ಗಳನ್ನು ಈತನೇ ಖರೀದಿಸುತ್ತಿದ್ದ. ಯುವತಿಯರ ಫೋಟೋ ಹಾಗೂ ಫೋನ್ ನಂಬರ್ ನ್ನು ವೆಬ್ ಸೈಟ್ ಗಳಲ್ಲಿ ಹಾಕುತ್ತಿದ್ದ ಆರೋಪಿ ಆನ್ ಲೈನ್ ಮೂಲಕವೇ ಹಣವನ್ನು ಕಟ್ಟುವಂತೆ ಗ್ರಾಹಕರಿಗೆ ತಿಳಿಸುತ್ತಿದ್ದ. ಇದಲ್ಲದೆ, ಸಾಮಾನ್ಯವಾಗಿ ಪ್ರತೀನಿತ್ಯ ಬರುವ ಗ್ರಾಹಕರಿಗೆ ವಾಟ್ಸ್ ಅಪ್ ನಲ್ಲೂ ಯುವತಿಯರ ಫೋಟೋಗಳನ್ನು ಕಳುಹಿಸುತ್ತಿದ್ದ.
ಮಹಿಳೆಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಕುರಿತಂತೆ ಖಚಿತ ಮಾಹಿತಿ ತಿಳಿದುಬಂದಿತ್ತು. ಈ ವೇಳೆ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ವಿಚಾರಣೆ ವೇಳೆ ದಂಧೆಗೆ 3 ವರ್ಷಗಳಿಂದಲೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಮುಖ್ಯ ಪೇದೆ ಕರಿಬಸಪ್ಪ ಸಹಾಯ ಮಾಡುತ್ತಿದ್ದರು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಆರೋಪಿಗಳ ಹೇಳಿಕೆಯ ಆಧಾರದ ಮೇರೆಗೆ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳ ಬಳಿಯಿದ್ದ ಕಾಲ್ ರೆಕಾರ್ಡ್ ಗಳನ್ನು ಪರಿಶೀಲಿಸಲಾಗುತ್ತಿದೆ. ಕರಿಬಸಪ್ಪ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ನಿಜವೇ ಆಗಿದ್ದರೆ, ಕ್ರಮಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos