ರಾಜ್ಯ

ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ವಿದೇಶಿ ಪ್ರವಾಸಿಗರ ಸ್ವೇಚ್ಛಾಚಾರ: ಬಿಯರ್ ಕುಡಿದು, ಚಪ್ಪಲಿ ಹಾಕಿ ತಿರುಗಾಟ

Shilpa D
ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕ ತಾಣವಾಗುತ್ತಿದೆಯಾ ಎಂಬ ಅನುಮಾನಗಳು ಇದೀಗ ಮೂಡಿವೆ. ಯಾಕೆಂದರೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ದಿ ವಿರೂಪಾಕ್ಷ ದೇವಾಲಯದಲ್ಲಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ದೇವಸ್ಥಾನದ ಆವರಣದಲ್ಲೆಲ್ಲಾ ಮದ್ಯಸೇವನೆ ಮಾಡುತ್ತಾ ಓಡಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತುಂಡುಡುಗೆ ಧರಿಸಿ ದೇವಸ್ಥಾನದ ಪ್ರಾಗಂಣದಲ್ಲಿ ಚಪ್ಪಲಿ ಧರಿಸಿಕೊಂಡು ನಡೆದಾಡಿದ್ದು ಸಹ ವಿದೇಶಿ ಪ್ರವಾಸಿಗರ ಸ್ವೇಚ್ಛಾಚಾರವನ್ನು ಎತ್ತಿತೋರಿಸುತ್ತಿತ್ತು ಇದು ಸ್ಥಳೀಯ ಪ್ರವಾಸಿಗರಿಗೆ ಇರುಸು ಮುರುಸು ಉಂಟು ಮಾಡುತ್ತಿತ್ತು. ಬಿಯರ್ ಬಾಟಲಿ ಹಿಡಿದ ವಿದೇಶಿ ಪ್ರವಾಸಿಗ ಗರ್ಭಗುಡಿಗೆ ಪ್ರವೇಶಿಸಲು ಯತ್ನಿಸಿದ, ಆದರೆ ಅಲ್ಲಿದ್ದ ಭಕ್ತರು ಆತನನ್ನು ಒಳಗೆ ಬಿಡಲಿಲ್ಲ.
ದೇವಾಲಯದಲ್ಲಿ ವಿದೇಶಿ ಪ್ರವಾಸಿಗರು ಈ ರೀತಿ ಅನುಚಿತವಾಗಿ ವರ್ತಿಸಿರುವುದು ಇದೇ ಮೊದಲಲ್ಲ, ಸ್ಥಳೀಯ ಸಂಸ್ಕೃತಿಯ ಬಗ್ಗೆ ಅರಿವಿಲ್ಲದೇ ಈ ರೀತಿ ವಿದೇಶಿ ಪ್ರವಾಸಿಗರು ವರ್ತಿಸುತ್ತಿದ್ದಾರೆ. 
ದೇವಸ್ಥಾನದಲ್ಲಿ ಹತ್ತಾರು ಕಾವಲುಗಾರರು, ಹಾಗೂ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಿದ್ದರೂ ಸಹ ಯಾರೊಬ್ಬರು ಸಹ ವಿದೇಶಿ ಪ್ರವಾಸಿಗರ ಈ ವರ್ತನೆಯನ್ನು ವಿರೋಧಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಮಲಿನಲ್ಲಿರುವವರನ್ನು ದೇವಾಲಯದ ಒಳಗೆ ಬಿಡದಂತೆ ಸೆಕ್ಯೂರಿಟಿ ಗಾರ್ಡ್ ಗಳಿಗೆ ನಾವು ನಿರ್ದೇಶನ ನೀಡಿದ್ದೇವೆ, ಕೆಲ ವಿದೇಶಿ ಪ್ರವಾಸಿಗರನ್ನು ನಿರ್ವಹಿಸುವುದು ನಿಜವಾಗಿಯ ಕಷ್ಟದ ಕೆಲಸ ಎಂದು ವಿರೂಪಾಕ್ಷ ದೇವಾಲಯದ ಕಾರ್ಯಕಾರಿ ಅಧಿಕಾರಿ ಪ್ರಕಾಶ್ ರಾವ್ ಹೇಳಿದ್ದಾರೆ. 
SCROLL FOR NEXT