ರಾಜ್ಯ

ಬೆಂಗಳೂರು: ಸುಷ್ಮಾ ಸ್ವರಾಜ್ ರ ನಕಲಿ ಸಹಿ ಹಾಕಿ ಪಾಸ್ ಪೋರ್ಟ್ ಪಡೆಯಲು ಯತ್ನಿಸಿದ ಸೋದರರ ಬಂಧನ

Sumana Upadhyaya
ಬೆಂಗಳೂರು: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಕಲಿ ಸಹಿ ಹಾಕಿ ಪಾಸ್ ಪೋರ್ಟ್ ಕಚೇರಿಗೆ ಶಿಫಾರಸು ಪತ್ರ ಕಳುಹಿಸಿದ ವೆಬ್ ಡಿಸೈನರ್ ಮತ್ತು ಟಿವಿ ನಟನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಸೋದರರಾಗಿದ್ದು, ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಸರಿಯಾದ ದಾಖಲೆಗಳನ್ನು ನೀಡಲು ವಿಫಲರಾಗಿದ್ದರು. ಅಧಿಕಾರಿಗಳು ಅವರ ಅರ್ಜಿಯನ್ನು ತಿರಸ್ಕರಿಸಿದಾಗ ಸುಷ್ಮಾ ಸ್ವರಾಜ್ ಅವರ ನಕಲಿ ಸಹಿ ಮಾಡಿ ಶಿಫಾರಸು ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಪಾಸ್ ಪೋರ್ಟ್ ಕಚೇರಿಗೆ ಕಳುಹಿಸಿದರು.
ಬಂಧಿತರನ್ನು ಸೂರ್ಯ ರೋಶನ್ ಅಲಿಯಾಸ್ ಇಮ್ರಾನ್(21) ಮತ್ತು ಆತನ ಹಿರಿಯ ಸೋದರ ಆರ್ಯ ರೋಶನ್ ಅಲಿಯಾಸ್ ಇಮ್ತಿಯಾಸ್ (27ವ) ಎಂದು ಗುರುತಿಸಲಾಗಿದೆ. ಅವರು ಜೆಪಿ ನಗರದ ಸಾರಕ್ಕಿ ನಿವಾಸಿಗಳಾಗಿದ್ದಾರೆ.
ಸ್ಥಳೀಯ ಪಾಸ್ ಪೋರ್ಟ್ ಕಚೇರಿ ಸಲ್ಲಿಸಿದ್ದ ದೂರಿನನ್ವಯ ಪೊಲೀಸರು ಸೋದರರ ಮನೆಗೆ ದಾಳಿ ನಡೆಸಿದರು. ಆಗ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಮತ್ತು ಇತರ ಸಚಿವರ ನಕಲಿ ಲೆಟರ್ ಹೆಡ್ ಗಳು ಮತ್ತು ಭಾರತ ಸರ್ಕಾರದ ನಕಲಿ ಸ್ಟಾಂಪ್ ಗಳು ದೊರಕಿವೆ.
2012ರಲ್ಲಿ ಈ ಸೋದರರು ಪಾಸ್ ಪೋರ್ಟ್ ಗೆ ಅರ್ಜಿ ಹಾಕಿದ್ದರು. ಅದರಲ್ಲಿ ಅಪಾಯಿಂಟ್ ಮೆಂಟ್ ಕೂಡ ಸಿಕ್ಕಿತ್ತು. ಕೋರಮಂಗಲ ಪಾಸ್ ಪೋರ್ಟ್ ಕಚೇರಿಯ ಅಧಿಕಾರಿಗಳು, ದಾಖಲೆಗಳು ಸರಿಯಾಗಿಲ್ಲದ ಕಾರಣ , ಅವರ ಹೆಸರು ಮತ್ತು ಹುಟ್ಟಿದ ದಿನಾಂಕ ಹೊಂದಿಕೆಯಾಗದ ಕಾರಣ ತಿರಸ್ಕಾರವಾಗಿತ್ತು.
ಅವರು ಮತ್ತೆ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿದ್ದರು. ಅದರಲ್ಲಿ ಸುಷ್ಮಾ ಸ್ವರಾಜ್ ಅವರ ನಕಲಿ ಸಹಿ ಹಾಕಿದ ಶಿಫಾರಸು ಪತ್ರವನ್ನು ಕಳುಹಿಸಿದ್ದರು. ಲೆಟರ್ ಹೆಡ್ ನಲ್ಲಿ ಸುಷ್ಮಾ ಅವರ ಫೋಟೋ ಕೂಡ ಪ್ರಿಂಟ್ ಆಗಿತ್ತು. ಕಾಗದದಲ್ಲಿ ತಾವು ಸುಷ್ಮಾ ಸ್ವರಾಜ್ ಅವರಿಗೆ ಹತ್ತಿರದವರಾಗಿರುವುದರಿಂದ ಅರ್ಜಿಯನ್ನು ಪರಿಗಣಿಸಬೇಕೆಂದು ಬರೆಯಲಾಗಿತ್ತು. ಇದು ನಕಲಿ ಪತ್ರ ಎಂದು ಗೊತ್ತಾದಾಗ ಪಾಸ್ ಪೋರ್ಟ್ ಕಚೇರಿ ಕೋರಮಂಗಲ ಪೊಲೀಸರಿಗೆ ತಿಳಿಸಿದರು.
SCROLL FOR NEXT