ರಾಜ್ಯ

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಪ್ರಕರಣ: ದಂಧೆಗೆ ಕಾವಲಿದ್ದ ಮುಖ್ಯ ಪೇದೆ ಬಂಧನ

Manjula VN
ಬೆಂಗಳೂರು: ಉದ್ಯಾನನಗರಿಯಲ್ಲಿ ವೇಶ್ಯಾವಾಟಿಕೆ ದಂಧೆ ಹೆಚ್ಚಾಗಿದ್ದು, ಬಂಗಲೆಯೊಂದರಲ್ಲಿ ನಡೆಸಲಾಗುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಸಹಾಯ ಮಾಡುತ್ತಿದ್ದನೆಂದು ಹೇಳಲಾಗುತ್ತಿದ್ದು ಮುಖ್ಯ ಪೇದೆಯೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಪರಪ್ಪನ ಅಗ್ರಹಾರ ಠಾಣೆಯ ಮುಖ್ಯ ಪೇದೆ ಕರಿಬಸಯ್ಯ ಬಂಧಿತ ವ್ಯಕ್ತಿಯಾಗಿದ್ದಾರೆ. ಮೈಕೋ ಲೇಔಟ್ ಠಾಣೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದ ಕರಿಬಸಪ್ಪ ಕೆಲ ವರ್ಷಗಳ ಹಿಂದಷ್ಟೇ ಪರಪ್ಪನ ಅಗ್ರಹಾರ ಠಾಣೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಯೂ ಸಹ ಠಾಣೆಯ ಖರ್ಚು ವೆಚ್ಚ ಹಾಗೂ ಹಣಕಾಸಿನ ಅತರೆ ಮೂಲಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. 
ನಗರದ ಬಿಟಿಎಂ ಲೇಔಟ್'ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ಮೇಲೆ ಕೆಲ ದಿನಗಳ ಹಿಂದಷ್ಟೇ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಉಸ್ಮಾನ್, ನರೇಶ್ ಸಿಂಗ್, ಪರ್ವೇಜ್ ಖಾನ್ ಮತ್ತು ಶರವಣ ಎಂಬ ನಾಲ್ವರು ಮಧ್ಯವರ್ತಿಗಳನ್ನು ಬಂಧನಕ್ಕೊಳಪಡಿಸಿದ್ದರು. 
ಉಸ್ಮಾನ್ ದಂಧೆಯ ಪ್ರಮುಖ ಆರೋಪಿಯಾಗಿದ್ದು, ಈತ ವೆಬ್ ಸೈಟ್ ವೊಂದನ್ನು ತೆರೆದು, ಈ ಮೂಲಕ ಶ್ರೀಮತರು, ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಟೆಕ್ಕಿಗಳನ್ನು ಸಂಪರ್ಕಿಸುತ್ತಿದ್ದ. ಸಿಇಒಗಳು, ಕಂಪನಿಯ ಅತಿಥಿಗಳು ಮಾತ್ರ ಮನೆಗೆ ಬರುತ್ತಾರೆಂದು ಹೇಳಿದ್ದ ಆರೋಪಿ ಉದ್ಯಮಿಯೊಬ್ಬರಿಂದ ಬಂಗಲೆಯನ್ನು ಬೋಗ್ಯಕ್ಕೆ ಪಡೆದುಕೊಂಡು ಅಲ್ಲಿ ವೇಶ್ಯಾವಾಟಿಕೆಗೆ ನಡೆಸುತ್ತಿದ್ದ. 
ವಿಚಾರಣೆ ವೇಳೆ ಉಸ್ಮಾನ್ ದಂಧೆಗೆ ಪರಪ್ಪನ ಅಗ್ರಹಾರದಲ್ಲಿರುವ ಮುಖ್ಯ ಪೇದೆ ಕರಿಬಸಯ್ಯ ಎಂಬುವವರು ಸಹಾಯ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದ. ಆರೋಪಿ ನೀಡಿದ ಮಾಹಿತಿ ಆಧಾರದ ಮೇರೆಗೆ ಪೊಲೀಸರು ತನಿಖೆ ನಡೆಸಿ ಇದೀಗ ಮುಖ್ಯ ಪೇದೆ ಕರಿಬಸಯ್ಯ ಅವರನ್ನು ಬಂಧನಕ್ಕೊಳಪಡಿಸಿದ್ದಾರೆ. 
ವೇಶ್ಯೆಯರ ಸಹವಾಸಕ್ಕೆ ಬರುತ್ತಿದ್ದ ಗ್ರಾಹಕರು ಸ್ವೈಪಿಂಗ್ ಕಾರ್ಡ್ ಮೂಲಕ ಹಣವನ್ನು ಪಾವತಿಸುತ್ತಿದ್ದರು. ಕರಿಬಸಯ್ಯ ಮಾಮೂಲಿ ಕೊಡದಿದ್ದರೆ ದಾಳಿ ನಡೆಸುವುದಾಗಿ ಹೆದರಿಸಿ ಮಾಸಿಕ ರೂ.3ರಿಂದ 5 ಲಕ್ಷ ವಸೂಲಿ ಮಾಡುತ್ತಿದ್ದ. ಕರಿಬಸಯ್ಯ ದಂಧೆಕೋರರ ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ನಲ್ಲಿ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. 
ಕಳೆದ ಮೂರು ವರ್ಷಗಳಿಂದಲೂ ವೇಶ್ಯಾವಾಟಿಕೆ ದಂಧೆಯನ್ನು ನಡೆಸಲಾಗುತ್ತಿದ್ದು, ಕರಿಬಸಯ್ಯ ದಂಧೆಕೋರರೊಡೆ ಸಂಪರ್ಕವನ್ನು ಹೊಂದಿದ್ದರು. ಮಡಿವಾಳ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡರೆ ತಾನೇ ನಿಭಾಯಿಸುವುದಾಗಿ ದಂಧೆಕೋರರಿಗೆ ಭರವಸೆ ನೀಡಿದ್ದ. ಉಸ್ಮಾನ್ ಬಂಗಲೆ ಬೋಗ್ಯಕ್ಕೆ ತೆಗೆದುಕೊಳ್ಳುವಾಗಲೂ ಪೇದೆ ಸಹಾಯ ಮಾಡಿದ್ದ. ಮಾಲೀಕರ ಮನವೊಲಿಸಿ ಬಂಗಲೆಯನ್ನು ಕೊಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 
ತನಿಖೆ ವೇಳೆ ಕರಿಬಸಯ್ಯ ಅವರ ಫೋನ್ ಕಾಲ್ ರೆಕಾರ್ಡ್ ಗಳನ್ನು ಪರಿಶೀಲನೆ ನಡೆಸಿದ್ದು, ಕರಿಬಸಯ್ಯ ಅವರು ಪ್ರತೀನಿತ್ಯ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿದುಬಂದಿತ್ತು. ಇದಲ್ಲದೆ. ಹಣ ಕುರಿತಂತೆ ಆರೋಪಿಗಳಿಗೆ ಕರಿಬಸಯ್ಯ ಸಂದೇಶಗಳನ್ನು ಕಳುಹಿಸಿರುವುದೂ ಕೂಡ ತಿಳಿದುಬಂದಿತ್ತು. ಇದೀಗ ಪೇದೆಯ ಬ್ಯಾಂಕ್ ಖಾತೆನ್ನು ಜಪ್ತಿ ಮಾಡಲಾಗಿದೆ. ಪೇದೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT