ಮೈಸೂರು: ಡಬಲ್ ಟ್ಯ್ರಾಕ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸುತ್ತವೆ ಎಂದು ನಿರೀಕ್ಷೆ ಇಟ್ಟುಕೊಳ್ಳಬೇಡಿ, ಏಕೆಂದರೇ ಅದರಿಂದ ನಿಮಗೆ ನಿರಾಶೆಯಾಗುತ್ತದೆ.
ಟ್ರಾಫಿಕ್ ಸಮಸ್ಯೆ ಹೆಚ್ಚಿರುವುದರಿಂದ ಬೆಂಗಳೂರು-ಮೈಸೂರು ಮಾರ್ಗಕ್ಕೆ ಹೆಚ್ಚುವರಿಯಾಗಿ ರೈಲುಗಳನ್ನು ಹಾಕಲು ಸಾಧ್ಯವಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ನಡೆದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ವಾಸು ಹೆಚ್ಚುವರಿ ರೈಲಿನ ಬಗ್ಗೆ ಪ್ರಶ್ನಿಸಿದರು ಈ ವೇಳೆ ಉತ್ತರಿಸಿದ ವಿಭಾಗೀಯ ರೈಲ್ವೆ ಮ್ಯಾನೇಜರ್ ಅತುಲ್ ಗುಪ್ತಾ ಮೈಸೂರು ಜಂಕ್ಷನ್ ನಲ್ಲಿ ಈಗಾಗಲೇ ಆರು ಪ್ಲಾಟ್ ಫಾರಂಗಳಿವೆ, ಹೀಗಾಗಿ ರೈಲು ಸಂಚಾರದ ಟ್ರಾಫಿಕ್ ನಿಬಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಅತಿ ಹೆಚ್ಚು ಜನ ಸಂದಣಿಯಿರುತ್ತದೆ. ಆದರೆ ರೈಲು ನಿಲ್ದಾಣವನ್ನು ವಿಸ್ತರಿಸಲು ಸಾಧ್ಯವಿಲ್ಲ, ನಿಲ್ದಾಣದ ಸುತ್ತಮುತ್ತ ಕಟ್ಟಡಗಳು ಇರುವುದರಿಂದ ರೈಲ್ವೆ ನಿಲ್ದಾಣ ವಿಸ್ತರಿಸಲು ಅಲ್ಲಿ ಅಗತ್ಯವಾದ ಭೂಮಿ ಇಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಹೆಚ್ಚಿರುವ ದಟ್ಟಣೆ ತಗ್ಗಿಸಲು ಹಲವು ಅವಕಾಶಗಳಿವೆ, ಅಶೋಕಪುರ ಮತ್ತು ಬೆಳಗೊಳದಲ್ಲಿ ಟರ್ಮಿನಲ್ ಯಾರ್ಡ್ ಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಲಾಗುತ್ತಿದೆ, ಆದರೆ ಈ ಪ್ರದೇಶಗಳಲ್ಲೂ ಕೂಡ ಸ್ವಾಧೀನ ಪಡಿಸಿಕೊಳ್ಳಲು ಯಾವುದೇ ಭೂಮಿ ಲಭ್ಯವಿಲ್ಲ. ಕಡಕೊಳದಲ್ಲಿ ಸ್ಯಾಟಲೈಟ್ ಟರ್ಮಿನಲ್ ಅಭಿವೃದ್ಧಿಗೊಳಿಸುವ ಪ್ರಸ್ತಾವನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.