ಬೆಂಗಳೂರು: ಸಂವೃದ್ಧಿಯಾಗಿದ್ದ ನೀರಿನ ಸೆಲೆಯೊಂದು ಬೆಂಗಳೂರಿನಲ್ಲಿ ಕೇವಲ 2 ವರ್ಷಗಳಲ್ಲಿ ಹೇಗೆ ಸಂಪೂರ್ಣವಾಗಿ ನಾಶವಾಗಬಲ್ಲದು ಎಂಬುದನ್ನು ಜಯನಗರದಲ್ಲಿರುವ ಬೈರಸಂದ್ರ ಕೆರೆ ಅತ್ಯುತ್ತಮ ಉದಾಹರಣೆ.
ಕಲುಶಿತ ನೀರು, ತ್ಯಾಜ್ಯಗಳಿಂದ ಕೂಡಿರುವ ಬೆಳ್ಳಂದೂರು ಕೆರೆ ಅವಸ್ಥೆ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದೆ. ಆದರೆ ಬೈರಸಂದ್ರ ಕೆರೆಯಂತಹ ಸಣ್ಣ ಕೆರೆಗಳ ಕಥೆ ಮಾತ್ರ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ.
ನಿವೃತ್ತ ಆರ್ ಬಿಐ ನೌಕರರಾಗಿದ್ದ ವೆಂಕಟ ಸುಬ್ಬಾ ರಾವ್ ಅವರ ಕಾನೂನು ಹೋರಾಟದಿಂದ ಸುಮಾರು 14-ಎಕರೆಗಳಷ್ಟಿರುವ ಬೈರಸಂದ್ರ ಕೆರೆ 2015 ರಲ್ಲಿ ಪುನರುಜ್ಜೀವನಗೊಳಿಸಲಾಗಿತ್ತು. ಆರ್ ಬಿಐ ಲೇಔಟ್ ನ ನಿವಾಸಿ ವಿನುತಾ ನಾಯ್ಡು ಈ ಘಟನೆಯನ್ನು ನೆನಪಿಸಿಕೊಂಡಿದ್ದು, ಕೆರೆ ಪುನರುಜ್ಜೀವನಗೊಂಡ ಸಂತೋಷಕ್ಕೆ ನಾವು ಕೆರೆ ಹಬ್ಬವನ್ನೂ ಆಚರಿಸಿದ್ದೆವು. ಆದರೆ ಆ ಸಂಭ್ರಮವೆಲ್ಲವೂ ಹೆಚ್ಚು ಕಾಲ ಉಳಿಯದೇ, ನೆರೆಯ ಸ್ಲಮ್ ಹಾಗೂ ಇತರ ಕಟ್ಟಡಳ ತ್ಯಾಜ್ಯ ಹರಿದು ಕೆರೆಗೆ ಸೇರುತ್ತಿದ್ದು ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದೆ ಎಂದಿದ್ದಾರೆ.
70 ರ ಹಿರಿಯರಾದ ವೆಂಕಟ ಸುಬ್ಬಾ ರಾವ್ 1976 ರಿಂದ ಆರ್ ಬಿಐ ನ ನಿವಾಸಿಯಾಗಿದ್ದು ಬೈರಸಂದ್ರ ಕೆರೆಯ ಪುನರುಜ್ಜೀವನಕ್ಕೆ, ಉಳಿವಿಗೆ 25 ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಹಕ್ಕಿ ಹಾಗೂ ಮೀನುಗಳಿದ್ದ ಈ ಕೆರೆ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
1985 ರಲ್ಲಿ ಲಕ್ಷ್ಮಣ ರಾವ್ ಸಮಿತಿ ಕೆರೆಯ ಅಭಿವೃದ್ಧಿಗೆ ಶಿಫಾರಸ್ಸು ಮಾಡಿತ್ತು. ಆದರೆ 1992 ರಲ್ಲಿ ಭಗ್ನಾವಶೇಷಗಳನ್ನು ಕೆರೆಗೆ ತಂದು ಸುರಿಯಲು ಪ್ರಾರಂಭಿಸಿ ಸ್ಲಮ್ ನಿರ್ಮಾಣಕ್ಕೆ ಸಹಕಾರಿಯಾಗುವಂತೆ ಮಾಡಿದರು.
1996 ರಲ್ಲಿ ವೆಂಕಟ ಸುಬ್ಬಾ ರಾವ್ ಅವರು ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರ ಪರಿಣಾಮ ಕೋರ್ಟ್ ಕೆರೆಯ ದಡದಲ್ಲಿ ಮಾನವ ವಾಸಕ್ಕೆ ಅವಕಾಶ ನೀಡಬಾರದು ಎಂದು ತೀರ್ಪು ನೀಡಿತ್ತು. ಇದಾದ ಬಳಿಕ 2004 ರಲ್ಲಿ ಬಿಎಂಪಿ ಸುಮಾರು 1.25 ಕೋಟಿ ರೂ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಯ ಜವಾಬ್ದಾರಿ ವಹಿಸಿಕೊಂಡಿತ್ತು. ಎಲ್ಲವೂ ಹದಗೆಡಲು ಪ್ರಾರಂಭವಾಗಿದ್ದು ಆಗಿನಿಂದಲೆ. ಸರಿಯಾದ ನಿರ್ವಹಣೆ ಇಲ್ಲದೇ ಕಸ ತುಂಬಲು ಪ್ರಾರಂಭವಾಯಿತು.
ಅಷ್ಟೇ ಅಲ್ಲದೇ ಬಿಲ್ಡರ್ ಒಬ್ಬ ಕೆರೆಯನ್ನೇ ಅಡ ಇಟ್ಟು ಸಾಲ ತೆಗೆದುಕೊಂಡಿದ್ದರಿಂದ ಸಾಲ ವಾಪಸ್ ಪಡೆಯಲು ಕೆರೆಯ ಭಾಗದಲ್ಲಿದ್ದ ಭೂಮಿಯನ್ನು ಸಾಲ ರಿಕವರಿ ಟ್ರಿಬ್ಯೂನಲ್ ಹರಾಜು ಹಾಕಲು ಮುಂದಾಗಿತ್ತು. ಮತ್ತೆ ವೆಂಕಟ ಸುಬ್ಬಾ ರಾವ್ ಅವರು ಕೋರ್ಟ್ ಮೊರೆ ಹೋದ ಕಾರಣ 2011 ರಲ್ಲಿ ಅಂದಿನ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಇಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಆ ಹರಾಜು ಪ್ರಕ್ರಿಯೆಯನ್ನು ಅಸಿಂಧುಗೊಳಿಸಿದ್ದರು.
ಇಷ್ಟೆಲ್ಲಾ ಆದ ನಂತರ 2013 ರಲ್ಲಿ ಬಿಬಿಎಂಪಿಯಿಂದ ಕೆರೆ ಅಭಿವೃದ್ಧಿ ಜವಾಬ್ದಾರಿಯನ್ನು ಬಿಡಿಎ ವಹಿಸಿಕೊಂಡು 3.65 ಕೋಟಿ ರೂ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಗೊಳಿಸಿತ್ತಾದರೂ, ಕೆರೆಗೆ ಬೇಲಿ ಹಾಕಲಿಲ್ಲ. ಸ್ಲಮ್ ನಿವಾಸಿಗಳು, ಸ್ಥಳೀಯರು ಕಸ ತಂದು ಸುರಿಯಲು ಪ್ರಾರಂಭಿಸಿದರು. ಪರಿಣಾಮ ಕೆರೆ ತ್ಯಾಜ್ಯದಿಂದ ತುಂಬಿ ನಾಶವಾಗುವ ಸ್ಥಿತಿ ತಲುಪಿದೆ. ಕೆರೆಯನ್ನು ಉಳಿಸುವ ನಮ್ಮ ಎಲ್ಲಾ ಪ್ರಯತ್ನಗಳೂ ವ್ಯರ್ಥವಾಗುತ್ತಿವೆ ಎನ್ನುತ್ತಾರೆ ನೊಂದ ಹಿರಿಯ ವ್ಯಕ್ತಿ ವೆಂಕಟ ಸುಬ್ಬಾ ರಾವ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics