ಮೈಸೂರು: ಸ್ವಚ್ಛಭಾರತ ಅಭಿಯಾನದಡಿ ಸಾಂಸ್ಕತಿಕ ನಗರಿ ಮೈಸೂರನ್ನು ಮತ್ತೆ ಸ್ವಚ್ಛನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈಗಾಗಲೇ ಎರಡು ಬಾರಿ ಸ್ವಚ್ಛ ನಗರವೆಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಮೈಸೂರು ಪಾಲಿಕೆ ಇದೀಗ ಮೂರನೇ ಬಾರಿಗೂ ಕ್ಲೀನ್ ಸಿಟಿ ಎನಿಸಿಕೊಂಡಿದೆ.
ಮೈಸೂರು ಮಹಾನಗರಪಾಲಿಕೆಗೆ ಈ ಬಾರಿಯೂ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯನ್ನು ಸ್ವೀಕರಿಸಲು ಮೇ 4ರಂದು ಮಹಾನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಹಾಗೂ ಮೇಯರ್ ಎಂ.ಜೆ.ರವಿಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ.ಮೈಸೂರು ಮಹಾನಗರ ಪಾಲಿಕೆಗೆ, ಕೇಂದ್ರ ಸರ್ಕಾರ ನಗರಾಭಿವೃದ್ಧಿ ಮಂತ್ರಾಲಯದಿಂದ ಶೂನ್ಯ ಕಸ ನಿರ್ವಹಣಾ ಘಟಕ, ಸ್ವಚ್ಛತೆ, ವೈಜ್ಞಾನಿಕ ಕಸ ವಿಂಗಡಣೆ, ಶೇಖರಿಸಿದ ಕಸ ವಿಲೇವಾರಿಗೆ ಅತ್ಯುತ್ತಮ ಪ್ರಶಸ್ತಿ ನೀಡಿದ್ದು
ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಲಿದ್ದಾರೆ. ಈ ಕುರಿತು ಆಯುಕ್ತರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಯಾವ ಸ್ಥಾನವನ್ನು ಕಾಯ್ದುಕೊಂಡಿದೆ ಎಂಬುದು ರಹಸ್ಯವಾಗಿದೆ. ಒಟ್ಟಿನಲ್ಲಿ ಮೈಸೂರು ಮತ್ತೊಮ್ಮೆ ಜಗತ್ತಿನಾದ್ಯಂತ ಸ್ವಚ್ಛನಗರವೆಂದು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವೇ ಆಗಿದೆ.