ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮನೆ ಮತ್ತು ಕಚೇರಿ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಕರ್ನಾಟಕ ಪೊಲೀಸ್ ಪಡೆಯ ಸೇವೆಯನ್ನು ಬಳಸಿಕೊಳ್ಳದೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಬಳಸಿಕೊಂಡಿದ್ದಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಕರ್ನಾಟಕ ಗೃಹ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ ಅವರು ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಅದಿಯಾ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರು ಮತ್ತು ಕನಕಪುರದಲ್ಲಿರುವ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸ ಮತ್ತು ವಿಧಾನ ಪರಿಷತ್ ಸದಸ್ಯ ರವಿ ಅವರ ನಿವಾಸದ ಮೇಲೆ ದಾಳಿ ನಡೆಸುವ ವೇಳೆ ಆದಾಯ ತೆರಿಗೆ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಶಸ್ತ್ರಸಜ್ಜಿತರಾಗಿದ್ದ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದಲಾದರೂ ಐಟಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಐಟಿ ದಾಳಿಗಳು ನಡೆದ ಸಂದರ್ಭದಲ್ಲಿ ಕೇಂದ್ರದ ಯಾವುದೇ ಸಶಸ್ತ್ರ ಪಡೆಯ ಸಿಬ್ಬಂದಿಯನ್ನು ಬಳಸಿಕೊಂಡಿರಲಿಲ್ಲ. ರಾಜ್ಯ ಪೊಲೀಸರನ್ನು ಬಳಸಿಕೊಂಡೇ ಈ ಹಿಂದೆ ಐಟಿ ದಾಳಿಗಳು ನಡೆದಿವೆ. ಆದರೆ, ಈ ಬಾರಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಕೇಂದ್ರ ಸಶಸ್ತ್ರ ಪಡೆಯನ್ನು ಬಳಸಿಕೊಂಡಿರುವುದು ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಐಟಿ ಅಧಿಕಾರಿಗಳ ಈ ಕ್ರಮಕ್ಕೆ ಕರ್ನಾಟಕ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದು ಸುಭಾಷ್ ಚಂದ್ರ ಅವರು ಪತ್ರದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics