ರೆಸಾರ್ಟ್ ನಲ್ಲಿರುವ ಗುಜರಾತ್ ಶಾಸಕರು
ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಆಸ್ತಿ ಹಾಗೂ ಈಗಲ್ ಟನ್ ರೆಸಾರ್ಟ್ ನ ಕೊಠಡಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಗುಜರಾತ್ ಕಾಂಗ್ರೆಸ್ ಶಾಸಕರ ನೈತಿಕ ಸ್ಥೈರ್ಯ ಕುಗ್ಗುವಂತೆ ಮಾಡಿದೆ.
ಗುರುವಾರವೂ ಕೂಡ ಐಟಿ ದಾಳಿ ಮುಂದುವರಿದ ಹಿನ್ನೆಲೆಯಲ್ಲಿ ಶಾಸಕರು ಬಾವೋದ್ವೇಗ ಮತ್ತು ಆತಂಕಕ್ಕೊಳಗಾಗಿದ್ದಾರೆ. ಇಬ್ಬರು ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಳಿದ ಶಾಸಕರು ವಾಪಸ್ ಮನೆಗೆ ಮರಳುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ.
ಜ್ಯೋತಿಬಾ ಪಟೇಲ್ ಮತ್ತು ರಾಜು ಪಾರ್ಮಾರ್ ಅವರನ್ನು ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕರು ಆತಂಕಗೊಂಡಿರುವ ಕಾರಣ ಇಬ್ಬರು ವೈದ್ಯರನ್ನು ರೆಸಾರ್ಟ್ ನಲ್ಲಿ ನಿಯೋಜಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಗುಜರಾತ್ ಕಾಂಗ್ರೆಸ್ ಶಾಸಕರ ಹೊಣೆಗಾರಿಗೆ ಹಾಗೂ ಭದ್ರತೆಯನ್ನು ಶಿವಕುಮಾರ್ ಅವರಿಗೆ ವಹಿಸಲಾಗಿತ್ತು. ಆದರೆ ಐಟಿ ದಾಳಿಯಿಂದಾಗಿ ರೆಸಾರ್ಟ್ ನಲ್ಲಿ ಶಿವಕುಮಾರ್ ಇಲ್ಲದ ಕಾರಣ ಶಾಸಕರು ಭಯಗೊಂಡಿದ್ದಾರೆ.
ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಶಾಸಕರೊಂದಿಗೆ ನಿರಂತರ ಮೊಬೈಲ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.ಯಾವುದೇ ಕಾರಣಕ್ಕೂ ಹೆದರದೇ ಧೈರ್ಯದಿಂದ ಇರುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೆಸಾರ್ಟ್ ನಲ್ಲಿರುವ ಹಲವು ಶಾಸಕರು ವಾಪಸ್ ಮನೆಗೆ ತೆರಳುವ ಇಚ್ಚೆ ವ್ಯಕ್ತ ಪಡಿಸಿದ್ದಾರೆ. ಕೆಲ ಶಾಸಕರ ರೆಸಾರ್ಟ್ ಬಳಿಯಿರುವ ದೇವಾಲಯಕ್ಕೆ ತೆರಳ ಈ ಪೊಲಿಟಿಕಲ್ ಹೈಡ್ರಾಮಾ ಬೇಗ ಬಗೆಹರಿಸುವಂತೆ ದೇವರಲ್ಲಿ ಮೊರೆ ಹೋಗಿದ್ದಾರೆ.
ನಿನ್ನೆ ಸಂಜೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ರೆಸಾರ್ಟ್ ಗೆ ಭೇಟಿ ನೀಡಿ ಶಾಸಕರಿಗೆ ಧೈರ್ಯ ತುಂಬಿದ್ದಾರೆ ನಿಮ್ಮ ರಕ್ಷಣೆ ಹೊಣೆ ನಮ್ಮದು , ಹೀಗಾಗಿ ನಿಶ್ಟಿಂತೆಯಿಂದ ಇರುವಂತೆ ಹೇಳಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ಶಾಸಕರ ಜವಾಬ್ದಾರಿ ನಮ್ಮ ಮೇಲಿದೆ. ಯಾವ ಶಾಸಕರು ವಾಪಸ್ ತೆರಳುವುದಾಗಿ ಹೇಳಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.