ಬೆಂಗಳೂರು: ಇಂಧನ ಡಿಕೆ ಶಿವಕುಮಾರ್ ಅವರ ಆಪ್ತ ಹಾಗೂ ಉದ್ಯಮಿ ಸುನಿಲ್ ಕುಮಾರ್ ಶರ್ಮಾ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ನಗರದ ಎನ್ ಆರ್ ಕಾಲೋನಿಯಲ್ಲಿರುವ ಅವರ ಬೃಹತಚ್ ಬಂಗಲೆ ಮೇಲೆ ದಾಳಿ ಮಾಡಿದ್ದಾರೆ.
ಖ್ಯಾತ ಟ್ರಾವಲ್ ಸಂಸ್ಥೆ ಶರ್ಮಾ ಟ್ರಾವಲ್ಸ್ ನ ಮಾಲೀಕರಾದ ಸುನೀಲ್ ಕುಮಾರ್ ಶರ್ಮಾ ಡಿಕೆಶಿ ಅವರ ಬಿಸಿನೆಸ್ ಪಾರ್ಟನರ್ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರ ಮನೆ ಮೇಲೂ 8 ಅಧಿಕಾರಿಗಳ ತಂಡ ದಾಳಿ ಮಾಡಲಾಗಿದ್ದು, ನಗರದ ಎನ್ ಆರ್ ಕಾಲೋನಿಯಲ್ಲಿರುವ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸುನಿಲ್ ಕುಮಾರ್ ಶರ್ಮಾ ಅವರ ಮನೆಯಲ್ಲಿ ಸುಮಾರು 16 ಲಾಕರ್ ಗಳು ಪತ್ತೆಯಾಗಿದ್ದು, ಈ 16 ಲಾಕರ್ ಗಳಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬೇಸ್ತು ಬಿದ್ದ ಅಧಿಕಾರಿಗಳು
ಇನ್ನು ಬೃಹತ್ ಬಂಗಲೆಯಲ್ಲಿ ಪತ್ತೆಯಾದ ಚಿನ್ನವನ್ನು ನೋಡಿದ ಅಧಿಕಾರಿಗಳು ಅಕ್ಷರಶಃ ಬೇಸ್ತು ಬಿದ್ದಿದ್ದು, ಮೇಲ್ನೋಟಕ್ಕೆ ಚಿನ್ನದ ಪ್ರಮಾಣವನ್ನು ಅಳತೆ ಮಾಡಲಾಗದೇ ಅಧಿಕಾರಿಗಳು ಪರಿತಪಿಸಿದ ಘಟನೆ ಕೂಡ ನಡೆದಿದೆ. ಬಳಿಕ ಕೆಲ ಚಿನ್ನಾಭರಣ ಮಾರಾಟ ಮಾಡುವ ಮಾರ್ವಾಡಿಗಳನ್ನು ನಿವಾಸಕ್ಕೆ ಕರೆಸಿಕೊಂಡ ಅಧಿಕಾರಿಗಳು ಅವರಿಂದ ಚಿನ್ನದ ಮೌಲ್ಯವನ್ನು ಅಳತೆ ಮಾಡಿಸಿದ್ದಾರೆ. ಅಂತೆಯೇ ಮನೆಯಲ್ಲಿ ನಡೆದ ಯಾವುದೇ ವಿಚಾರವನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ತಾಕೀತು ಮಾಡಿದ ಕಾರಣ, ಮನೆಯಿಂದ ಹೊರಗೆ ಬಂದ ಮಾರ್ವಾಡಿಗಳು ಮಾಧ್ಯಮದವರಿಂದ ತಪ್ಪಿಸಿಕೊಂಡು ಓಡಿ ಹೋದರು.
20 ಸಾವಿರ ಚದರ ಅಡಿಯ ಬೃಹತ್ ಬಂಗಲೆ
ಇನ್ನು ಸುನಿಲ್ ಕುಮಾರ್ ಶರ್ಮಾ ಅವರ ಬೃಹತ್ ಬಂಗಲೆ ಸುಮಾರು 20 ಸಾವಿರ ಚದರ ಅಡಿಯಲ್ಲಿ ನಿರ್ಮಾಣವಾಗಿದ್ದು, ಐಟಿ ಅದಿಕಾರಿಗಳಿಗೆ ದೊರೆತಿರುವ ದಾಖಲೆಗಳ ಅನ್ವಯ ಈ ಭೂಮಿಯನ್ನು ಐದು ವರ್ಷಗಳ ಹಿಂದೆ ಸುನಿಲ್ ಕುಮಾರ್ ಶರ್ಮಾ ಅವರು ಸುಮಾರು 9 ಕೋಟಿ ನೀಡಿ ಖರೀದಿ ಮಾಡಿದ್ದಾರೆ. ಬಳಿಕ ಸುಮಾರು 27 ಕೋಟಿ ರು. ಹಣ ವ್ಯಯಿಸಿ ಮನೆ ನಿರ್ಮಿಸಿದ್ದಾರೆ. ಇದೀಗ ಈ ಬೃಹತ್ ಬಂಗಲೆಯ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ಎಂದು ಅಂದಾಜಿಸಲಾಗಿದೆ.