ರಾಜ್ಯ

ಮಾತೆ ಮಹಾದೇವಿ ವಿರುದ್ಧ ಹೇಳಿಕೆ: ರಂಭಾಪುರಿ ಸ್ವಾಮೀಜಿ ವಿರುದ್ಧ ದೂರು!

Srinivasamurthy VN

ಬೆಂಗಳೂರು: ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ರಂಭಾಪುರಿ ಸ್ವಾಮೀಜಿ ಅವರ ವಿರುದ್ಧ ದೂರು ದಾಖಲಾಗಿದ್ದು, ಹೇಳಿಕೆ ಖಂಡಿಸಿ ನಗರದ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷರಾದ ಶರಣ ಚಂದ್ರಮೌಳಿ ಅವರು ದೂರು ದಾಖಲು ಮಾಡಿದ್ದು, ರಂಭಾಪುರಿ ಸ್ವಾಮೀಜಿಗಳ ವಿರುದ್ಧ 153ಎ, 504, 509 ಸೆಕ್ಷನ್ ಅಡಿಯಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು  ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಾತೆ ಮಹಾದೇವಿ ಮತ್ತು ಲಿಂಗಾನಂದ ಅವರ ನಡುವಿನ ಸಂಬಂಧವನ್ನು ರಂಭಾಪುರಿ ಸ್ವಾಮೀಜಿಗಳು ಅನುಮಾನ ದೃಷ್ಟಿಯಲ್ಲಿ ನೋಡಿರುವುದು ಖಂಡನೀಯ. ಲಿಂಗಾಯತ ಧರ್ಮ ಸ್ವತಂತ್ರಕ್ಕಾಗಿ ನಡೆಯುತ್ತಿರುವ ಹೋರಾಟದ  ಹಾದಿ ತಪ್ಪಿಸಲು ರಂಭಾಪುರಿ ಸ್ವಾಮೀಜಿ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಮಾತೆ ಮಹಾದೇವಿ ಅವರ ವ್ಯಕ್ತಿಗತ ಅಪಪ್ರಚಾರ ಮಾಡಿ ಕೀಳು ಪ್ರಚಾರಕ್ಕೆ ಇಳಿದಿದ್ದಾರೆ. ಮಾತೆ ಮಹಾದೇವಿ ಅವರ ಚಾರತ್ರ್ಯ ಹರಣಕ್ಕೆ ಸ್ವಾಮೀಜಿ  ಯತ್ನಿಸಿದ್ದು, ಇದು ಖಂಡನೀಯ. ಈ ಕೂಡಲೇ ಅವರು ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.

ಇನ್ನು ದೂರಿನ ಕುರಿತಂತೆ ಪೊಲೀಸರು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮೊದಲು ದೂರಿನ ಕುರಿತಾದ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಗುರುತಿಸದ ಬಳಿಕ ಸಂಬಂಧ ಪಟ್ಟ ಠಾಣೆಗೆ ದೂರು ವರ್ಗಾಯಿಸಲಾಗುತ್ತದೆ. ಆ  ಬಳಿಕವಷ್ಟೇ ಮುಂದಿನ ವಿಚಾರಣೆ ನಡೆಸಿ ಎಫ್ ಐಆರ್ ದಾಖಲು ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT