ಬೆಂಗಳೂರು: ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿ ಒಂದು ಬಾರಿ ವಿಚಾರಣೆ ಎದುರಿಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ.
ಐಟಿ ದಾಳಿಯಿಂದಾಗಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕರ್ನಾಟಕದ ಪ್ರಭಾವಿ ಸಚಿವ ಡಿಕೆ ಶಿವಕುಮಾರ್ ಹಾಗೂ ಅವರ ಆಪ್ತರಿಗೆ ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ದಾಳಿಯ ವೇಳೆ 300 ಕೋಟಿ ರು.ಗೂ ಅಧಿಕ ಅಘೋಷಿತ ಆಸ್ತಿ-ಪಾಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬಕ್ಕೆ ಸಮನ್ಸ್ ಜಾರಿಗೊಳಿಸಿದ್ದಾರೆ. ಶಿವಕುಮಾರ್ ಅವರ ಮಾವ ತಿಮ್ಮಯ್ಯ, ಸೋದರಿ ಪದ್ಮ, ಗುರೂಜಿ ದ್ವಾರಕನಾಥ್, ಉದ್ಯಮಿ ಸಚಿನ್ ನಾರಾಯಣ್ ಮತ್ತವರ ಕುಟುಂಬದವರಿಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.