ರಾಜ್ಯ

ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ: ಮುಖಂಡರು, ನಾಯಕರ ಒತ್ತಾಯ

Sumana Upadhyaya
ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧಾರ್ಮಿಕ ಮಾನ್ಯತೆ ನೀಡಬೇಕೆಂಬ ಚರ್ಚೆಯ ಕಾವು ಹೆಚ್ಚಾಗುವ ಲಕ್ಷಣ ಕಾಣುತ್ತಿದೆ.  ನಿನ್ನೆ 40 ಲಿಂಗಾಯತ ಮಠಗಳ ಮುಖ್ಯಸ್ಥರು ಮತ್ತು ಇತರ ಮುಖಂಡರು, ಕೆಲವು ಸಚಿವರು ಒಗ್ಗಟ್ಟಾಗಿ ಲಿಂಗಾಯತರಿಗೆ ಪ್ರತ್ಯೇಕ ಸ್ವತಂತ್ರ ಹಾಗೂ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವಂತೆ ನಿರ್ಣಯ ಹೊರಡಿಸುವಂತೆ ಒತ್ತಾಯಿಸಿದರು. ಅಲ್ಲದೆ ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮ, ಸಿದ್ದಾಂತ ಮತ್ತು ವಚನಗಳನ್ನು ವೀರಶೈವದ ಹೆಸರಿನಲ್ಲಿ  ಬಳಸಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ಗಣಿ ಖಾತೆ ಸಚಿವ ವಿನಯ್ ಕುಲಕರ್ಣಿ ಭಾಗವಹಿಸಿದ್ದರು.
ನಂತರ ಮಠಾಧೀಶರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. 1994ರ ಕರ್ನಾಟಕ ಅಲ್ಪ ಸಂಖ್ಯಾತರ ಆಯೋಗದ ಕಾಯ್ದೆಯ ಕಲಂ 10(ಹ)ರ ಅಡಿಯಲ್ಲಿ ರಾಜ್ಯದಲ್ಲಿ ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಧರ್ಮವೆಂದು ಅಧಿಸೂಚನೆ ಹೊರಡಿಸಿ ಕೇಂದ್ರ ಸರ್ಕಾರಕ್ಕೂ ದೇಶಾದ್ಯಂತ ಅಲ್ಪಸಂಖ್ಯಾತ ಧರ್ಮವೆಂದು ಘೋಷಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿಯವರನ್ನು ಕೋರಿದರು.
ನಿನ್ನೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ಯ ಸಚಿವ ಸಂಪುಟದ ನಾಲ್ವರು ಸಚಿವರು ಹಾಗೂ ವಿರಕ್ತಮಠಗಳ ಪ್ರಮುಖ ಮಠಾಧೀಶರ ನೇತೃತ್ವದಲ್ಲಿ ಲಿಂಗಾಯತ ಒಂದು ಪ್ರತ್ಯೇಕ ಧರ್ಮವೆಂದು ಸಾಂವಿಧಾನಿಕ ಮಾನ್ಯತೆಗೆ ಹಕ್ಕೊತ್ತಾಯಕ್ಕಾಗಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಬಸವಾದಿ ಶರಣರ ಸಿದ್ದಾಂತಗಳನ್ನು ಒಪ್ಪುವುದಾದರೆ ಮಾತ್ರ ವೀರಶೈವರು ಕೂಡ ಲಿಂಗಾಯತ ಧರ್ಮದಲ್ಲಿ ಸೇರ್ಪಡೆಗೊಳ್ಳಲಿ ಎಂದು ತಾಕೀತು ಮಾಡಲಾಯಿತು.
SCROLL FOR NEXT