ವಿಲ್ಸನ್ ಗಾರ್ಡನ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈಗಾಗಲೇ ನಗರದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಇನ್ನೂ ಮೂರು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದ್ದು, ಬುಧವಾರ ಮತ್ತು ಗುರುವಾರ ಜನಜೀವನ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಘಟಕದ ಪ್ರಕಾರ, ರಾಜ್ಯದ ಕೆಲವು ಪ್ರದೇಶಗಳಲ್ಲಿ 20ರಿಂದ 30 ಮಿಲಿ ಮೀಟರ್ ಮಳೆ ಹಾಗೂ ಇನ್ನೂ ಕೆಲ ಒಳನಾಡಿನ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ.
ಲಕ್ಷ ದ್ವೀಪದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗುತ್ತಿದ್ದು, ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ದಾಖಲೆಯ 14 ಸೆ.ಮೀ. ಮಳೆ ಸುರಿದಿದೆ.
ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡಬೇಕಾಗಿದೆ. ನೂರಾರು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.