ರಾಜ್ಯ

ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಬಿಎಸ್‌ವೈ ಅರ್ಜಿ

Lingaraj Badiger
ಬೆಂಗಳೂರು: ಡಾ. ಶಿವರಾಮ ಕಾರಂತ ಲೇಔಟ್ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತಮ್ಮ ವಿರುದ್ಧ ದಾಖಲಿಸಿರುವ ಎರಡು ಎಫ್ಐಆರ್ ಗಳನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಶನಿವಾರ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಡಾ. ಶಿವರಾಮ ಕಾರಂತ ಲೇಔಟ್ ಅಧಿಸೂಚನೆಯನ್ನು ಹೈಕೋರ್ಟ್ ಈಗಾಗಲೇ ರದ್ದುಗೊಳಿಸಿದ್ದು, ರಾಜಕೀಯ ಪ್ರೇರಿತವಾಗಿ ತಮ್ಮ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಈ ಕೂಡಲೇ ಅದನ್ನು ರದ್ದುಗೊಳಿಸಬೇಕು ಎಂದು ಬಿಎಸ್ ವೈ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಅವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಆಗಸ್ಟ್ 21ರಂದು ಹೈಕೋರ್ಟ್‌ ವಿಚಾರಣೆ ನಡೆಸಲಿದೆ.
ಡಾ.ಡಿ.ಅಯ್ಯಪ್ಪ ಅವರು ಸಲ್ಲಿಸಿದ ದೂರಿನ ಅನ್ವಯ ಎಸಿಬಿ ಯಡಿಯೂರಪ್ಪ ವಿರುದ್ಧ ಎರಡು ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ದಾಖಲು ಮಾಡಿದೆ. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆಯೂ ಸಮನ್ಸ್ ನೀಡಲಾಗಿತ್ತು. ಆದರೆ, ಯಡಿಯೂರಪ್ಪ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ಸಮಯ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನಲ್ಲಿ ಡಾ. ಶಿವರಾಮ ಕಾರಂತ ಲೇಔಟ್ ಗಾಗಿ ವಶಪಡಿಸಿಕೊಳ್ಳಲಾಗಿದ್ದ 257 ಎಕರೆಯಷ್ಟು ಭೂಮಿಯನ್ನು ಡಿನೋಟಿಫೈ ಮಾಡಲು 2009-12 ರ ಅವಧಿಯಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ  ಆದೇಶ ಹೊರಡಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ಆಗಸ್ಟ್ 10 ರಂದು  ಎಫ್ಐಆರ್ ದಾಖಲಿಸಿದ್ದರು.
SCROLL FOR NEXT